ನವದೆಹಲಿ: ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರಿಂದ 25 ಕೋಟಿ ಲಂಚ ಕೇಳಿದ ಆರೋಪದ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಮತ್ತು ಇತರ ನಾಲ್ವರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್‌ಐಆರ್ ದಾಖಲಿಸಿದೆ. ಇದರ ಬೆನ್ನಲ್ಲೇ ಶುಕ್ರವಾರ ಸಮೀರ್ ವಾಂಖೆಡೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ಮಾಡಿ ಶೋಧ ಕಾರ್ಯಚರಣೆ ನಡೆಸಿದ್ದಾರೆ.
2021ರ ಅಕ್ಟೋಬರ್ 2ರಂದು ಕಾರ್ಡೆಲಿಯಾ ಕ್ರೂಸ್ ಹಡಗಿನಲ್ಲಿ ಮಾದಕ ವಸ್ತು ಪತ್ತೆ ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದ ಎನ್‌ಸಿಬಿ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ, ಡ್ರಗ್ಸ್ ವಿರೋಧಿ ಏಜೆನ್ಸಿ ಸ್ಥಾಪಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ)ಯು ವಾಂಖೆಡೆ ನೇತೃತ್ವದ ತನಿಖೆಯಲ್ಲಿ ಲೋಪವಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ತನಿಖಾಧಿಕಾರಿ ಸಮೀರ್ ವಾಂಖೆಡೆ ಚೆನ್ನೈಗೆ ವರ್ಗಾವಣೆ
ಮತ್ತೊಂದೆಡೆ, ಅಧಿಕಾರಿ ಸಮೀರ್ ವಾಂಖೆಡೆ ಮತ್ತು ಇತರರು ಸೇರಿಕೊಂಡು ಈ ಮಾದಕ ದ್ರವ್ಯ ದಂಧೆಯಲ್ಲಿ ಆರ್ಯನ್ ಖಾನ್ ಅವರನ್ನು ಬಂಧಿಸದಿರಲು 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೇ, ವಾಂಖೆಡೆ ಮತ್ತು ಆತನ ಸಹಚರರಿಂದ ಮುಂಗಡವಾಗಿ 50 ಲಕ್ಷ ರೂಪಾಯಿ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಸಿಬಿಐಗೆ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಆಧಾರದ ಮೇಲೆ ಸಮೀರ್ ವಾಂಖೆಡೆ ಮತ್ತು ಇತರ ನಾಲ್ವರ ವಿರುದ್ಧ ಸಿಬಿಐ ಕೇಸ್ ದಾಖಲಿಸಿಕೊಂಡಿದೆ. ಈ ಸಂಬಂಧ ಮುಂಬೈ, ದೆಹಲಿ, ಜಾರ್ಖಂಡ್ನ ರಾಂಚಿ ಮತ್ತು ಉತ್ತರ ಪ್ರದೇಶದ ಕಾನ್ಪುರ ಸೇರಿದಂತೆ 29 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು, ಆರ್ಯನ್ ಖಾನ್ ಬಂಧನದ ವೇಳೆ ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮುಖ್ಯಸ್ಥರಾಗಿದ್ದ ಸಮೀರ್ ವಾಂಖೆಡೆ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ವರ್ಷ ಮೇ ತಿಂಗಳಲ್ಲಿ ಚೆನ್ನೈನಲ್ಲಿರುವ ತೆರಿಗೆದಾರರ ಸೇವೆಗಳ ಮಹಾ ನಿರ್ದೇಶನಾಲಯಕ್ಕೆ ಅವರನ್ನು ವರ್ಗಾಯಿಸಲಾಗಿತ್ತು.
ಇದನ್ನೂ ಓದಿ: ಶಾರುಖ್ ಪುತ್ರನಿಗೆ ಕ್ಲೀನ್ ಚಿಟ್: ಅಧಿಕಾರಿ ಸಮೀರ್ ವಾಂಖೆಡೆ ಮೇಲೆ 'ಕಳಪೆ ತನಿಖೆ'ಯ ತೂಗುಕತ್ತಿ!
ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಸೇವನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ಎನ್ಸಿಬಿಯಿಂದ ಬಂಧನಕ್ಕೊಳಗಾಗಿದ್ದರು. ನಂತರ 2021ರ ನವೆಂಬರ್ 29ರಂದು ಜಾಮೀನು ಮಂಜೂರು ಮಾಡಲಾಗಿತ್ತು. ಇದರ ಬಳಿಕ ಜಾಮೀನಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್, ಆರ್ಯನ್ ಖಾನ್, ಅರ್ಬಾಜ್ ಖಾನ್ ಹಾಗೂ ಮತ್ತೋರ್ವ ವ್ಯಕ್ತಿ ಧಮೇಚಾ ಅಪರಾಧವೆಸಗಿದ್ದಾರೆಂದು ಸಾಬೀತುಪಡಿಸುವ ಯಾವುದೇ ಬಲವಾದ ಸಾಕ್ಷ್ಯಗಳು ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎಂದು ಹೇಳಿತ್ತು.
ಇದನ್ನೂ ಓದಿ: ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆ: ಶಾರುಖ್ ಪುತ್ರ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್