ನವದೆಹಲಿ: ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಇಂದು ಸುಮಾರು ಸತತ ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಸಿಸೋಡಿಯಾ ಅವರನ್ನು ಬಂಧಿಸಲಾಗಿದೆ.
ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್ ನೇತೃತ್ವದ ದೆಹಲಿ ಸರ್ಕಾರ ಜಾರಿ ತರಲು ಮುಂದಾಗಿದ್ದ ಹೊಸ ಅಬಕಾರಿ ನೀತಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಇದರಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ನಡೆದಿದೆ ಎಂದ ಆರೋಪ ಕೇಳಿ ಬಂದಿದೆ. ಕೇಂದ್ರ ತನಿಖಾ ಸಂಸ್ಥೆಗಳಾದ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿವೆ.
ಇದರ ತನಿಖೆಯ ಮುಂದುವರೆದ ಭಾಗವಾಗಿ ಇಂದು ದೆಹಲಿ ಡಿಸಿಎಂ ಆಗಿರುವ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದರು. ಅಂತೆಯೇ, ಬೆಳಗ್ಗೆ ವಿಚಾರಣೆಗಾಗಿ ಸಿಬಿಐ ಕಚೇರಿಗೆ ಅವರು ಆಗಮಿಸಿದ್ದರು. ಅಲ್ಲಿಂದ ಸುಮಾರು ಎಂಟು ಗಂಟೆಗಳ ಕಾಲ ಸಿಬಿಐ ಅಧಿಕಾರಿಗಳು ಸಿಸೋಡಿಯಾ ಅವರನ್ನು ವಿಚಾರಣೆ ನಡೆಸಿದ ಬಳಿಕ ಸಂಜೆ 7ರ ಸುಮಾರಿಗೆ ಬಂಧಿಸಿದ್ದಾರೆ.
ಭಯದಿಂದ ಸುಳ್ಳು ಕೇಸ್ ದಾಖಲು: ಬೆಳಗ್ಗೆ ಸಿಬಿಐ ಕಚೇರಿ ಆಗಮಿಸುವ ಮುನ್ನ ರಾಜ್ ಘಾಟ್‌ನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಸಿಸೋಡಿಯಾ, ಆಮ್ ಆದ್ಮಿ ಪಕ್ಷದ ನಾಯಕರಾದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹೆಚ್ಚುತ್ತಿರುವ ಜನಪ್ರಿಯತೆಗೆ ಪ್ರಧಾನಿ ನರೇಂದ್ರ ಮೋದಿ ಹೆದರುತ್ತಾರೆ. ಇದೇ ಕಾರಣಕ್ಕಾಗಿ ಸಿಬಿಐ ಮತ್ತು ಇಡಿ ಮೂಲಕ ಷಡ್ಯಂತ್ರ ನಡೆಸಲಾಗುತ್ತಿದೆ. ಜೊತೆಗೆ ನಮ್ಮ ಪಕ್ಷದ ನಾಯಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದ್ದರು.
ಅಲ್ಲದೇ, ಆಮ್ ಆದ್ಮಿ ಪಕ್ಷ ಮತ್ತಷ್ಟು ಬೆಳೆದಂತೆ ಬಿಜೆಪಿ ನಮ್ಮ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವುದನ್ನು ಮುಂದುವರಿಸುತ್ತದೆ. ಆದರೆ, ನಾವು ಸಿಬಿಐ, ಇಡಿ ಮತ್ತು ಅವರ ಸುಳ್ಳು ಪ್ರಕರಣಗಳಿಗೆ ಹೆದರುವುದಿಲ್ಲ ಎಂದು ಸಿಸೋಡಿಯಾ ವಾಗ್ದಾಳಿ ನಡೆಸಿದ್ದರು. ಇದೇ ವೇಳೆ, ಜನತೆ ಬಿಜೆಪಿಗೆ ಪರ್ಯಾಯವಾಗಿ ಆಪ್ ಅನ್ನು ಪರಿಗಣಿಸಲು ಪ್ರಾರಂಭಿಸುತ್ತಿದ್ದಾರೆ ಎಂದು ಹೇಳಿದ್ದರು.
ಆಮ್ ಆದ್ಮಿ ಪಕ್ಷ ಮಾತ್ರವೇ ಭವಿಷ್ಯದಲ್ಲಿ ಬಿಜೆಪಿಯನ್ನು ತೊಡೆದುಹಾಕುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಮೋದಿಜಿ ರಾಹುಲ್ ಗಾಂಧಿಗೆ ಹೆದರದೇ ಇರಬಹುದು. ಆದರೆ, ಅವರು ಹೆದರುವ ಒಂದು ಪಕ್ಷವಿದ್ದರೆ ಅದು ಆಪ್. ಅವರು ನನ್ನನ್ನು ಜೈಲಿಗೆ ಹಾಕುತ್ತಾರೆ, ಆದರೆ, ನಾವು ಹೆದರುವುದಿಲ್ಲ ಮತ್ತು ನಾವು ಹೋರಾಡುತ್ತೇವೆ. ಕೇಜ್ರಿವಾಲ್ ಮಾತ್ರ ಈ ದೇಶದ ಭವಿಷ್ಯದ ನಾಯಕ. ನಾನು ಕೇಜ್ರಿವಾಲ್ ಅವರಿಗೆ ಹೇಳಲು ಬಯಸುತ್ತೇನೆ. ಜನರ ಕಲ್ಯಾಣಕ್ಕಾಗಿ ನಿಮ್ಮ ಹೋರಾಟವನ್ನು ಮುಂದುವರಿಸಿ ಎಂದು ಸಿಸೋಡಿಯಾ ತಿಳಿಸಿದ್ದರು.
ಪ್ರತಿಭಟನೆ ನಡೆಸಿದ್ದ ಕಾರ್ಯಕರ್ತರು: ಇಂದು ಸಿಬಿಐ ವಿಚಾರಣೆಗೆ ಹಾಜರಾಗಿದ್ದ ಮನೀಶ್ ಸಿಸೋಡಿಯಾ ಅವರನ್ನು ಬೆಂಬಲಿಸಿ ಆಮ್ ಆದ್ಮಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸಿಆರ್ಪಿಎಸಿ ಸೆಕ್ಷನ್ 144ರ ಉಲ್ಲಂಘನೆ ಆರೋಪದ ಮೇಲೆ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ದೆಹಲಿ ಸಚಿವ ಗೋಪಾಲ್ ರೈ, ಶಾಸಕರಾದ ನೇಶ್ ಮೊಹ್ನಿಯಾ, ರೋಹಿತ್ ಕುಮಾರ್ ಮೆಹ್ರಾಲಿಯಾ, ಕುಲದೀಪ್ ಸಿಂಗ್, ಎಂಟು ಜನ ಮಹಿಳೆಯರು ಸೇರಿದಂತೆ ಮುಖಂಡರು ಮತ್ತು 50 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: 'ಆಮ್ ಆದ್ಮಿ ಪಕ್ಷ ಬಿಜೆಪಿ ಮುಕ್ತ ದೇಶ ಮಾಡಲಿದೆ': ಮನೀಶ್ ಸಿಸೋಡಿಯಾ