ಮುಂಬೈ: ತೌಕ್ತೆ ಸೈಕ್ಲೋನ್ ವೇಳೆ 49 ಜೀವಗಳ ಬಲಿ ಪಡೆದ ಬೋಟ್ ದುರಂತ ಸಂಭವಿಸಲು ನಿರ್ಲಕ್ಷ್ಯವೇ ಕಾರಣವೆಂದು ಬಾರ್ಜ್ P-305 ಕ್ಯಾಪ್ಟನ್ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಸಮುದ್ರದಿಂದ ರಕ್ಷಿಸಲ್ಟಟ್ಟು ಪ್ರಸ್ತುತ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾರ್ಜ್ನ ಮುಖ್ಯ ಎಂಜಿನಿಯರ್ ರೆಹಮಾನ್ ಶೇಖ್ ಅವರ ದೂರಿನ ಮೇರೆಗೆ ಕ್ಯಾಪ್ಟನ್ ರಾಕೇಶ್ ಬಲ್ಲವ್ ಹಾಗೂ ಸಂಬಂಧಪಟ್ಟ ಇತರ ಅಧಿಕಾರಿಗಳ ವಿರುದ್ಧ ಮುಂಬೈನ ಎಲ್ಲೋ ಗೇಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304 (2), 338, 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ತೌಕ್ತೆಗೆ ಮುಳುಗಿದ ನೌಕೆ: ಸಾವಿನ ಸಂಖ್ಯೆ 49ಕ್ಕೇರಿಕೆ; ಇನ್ನೂ 26 ಮಂದಿಗೆ ಸಮುದ್ರದಲ್ಲಿ ಶೋಧ
"ಒಂದು ವಾರದ ಮುಂಚೆಯೇ ತೌಕ್ತೆ ಚಂಡಮಾರುತದ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿತ್ತು. ಈ ಬಗ್ಗೆ ನಾನು ಕ್ಯಾಪ್ಟನ್ಗೆ ತಿಳಿಸಿದ್ದೇನೆ. ಆದರೂ ಅವರು ಈ ಕುರಿತು ಗಮನ ಹರಿಸಲಿಲ್ಲ. ನಾನು ಬಾರ್ಜ್ ಮಾಲೀಕರನ್ನೂ ಸಂಪರ್ಕಿಸಿ ವಿಚಾರ ತಿಳಿಸಿದೆ. ಆದ್ರೆ ಅವರೂ ಸಹ ಕೆಲಸ ಮುಂದುವರೆಸುವಂತೆ ತಿಳಿಸಿದ್ರು. ನಾನು ಎಚ್ಚರಿಕೆ ನೀಡುತ್ತಿದ್ದರೂ ನೌಕೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿಲ್ಲ" ಎಂದು ರೆಹಮಾನ್ ಶೇಖ್ ಆರೋಪಿಸಿದ್ದಾರೆ.
ಐದು ದಿನಗಳ ಹಿಂದೆ ತೌಕ್ತೆ ಚಂಡಮಾರುತದ ಆರ್ಭಟದಿಂದಾಗಿ ಮುಂಬೈ ತಟದ ಅರಬ್ಬಿ ಸಮುದ್ರದಲ್ಲಿ P305 ಬೋಟ್ ಕೊಚ್ಚಿಹೋಗಿತ್ತು. ನೌಕೆಯಲ್ಲಿದ್ದ 261 ಜನರ ಪೈಕಿ 186 ಮಂದಿಯನ್ನು ರಕ್ಷಿಸಲಾಗಿದ್ದು, ಈವರೆಗೆ 49 ಜನರ ಮೃತದೇಹ ಸಿಕ್ಕಿದೆ. ಉಳಿದ 26 ಮಂದಿಗಾಗಿ ನೌಕಾಪಡೆ ರಕ್ಷಣಾ-ಶೋಧ ಕಾರ್ಯಾಚರಣೆ ಮುಂದುವರೆಸಿದೆ.