ಮಯೂರ್ಭಂಜ್(ಒಡಿಶಾ) : ಇಬ್ಬರು ಸರ್ಕಾರಿ ಅಧಿಕಾರಿಗಳ ಮೇಲೆ ಕೇಂದ್ರ ಸಚಿವ ಬಿಶ್ವೇಶ್ವರ ಟುಡು ಹಲ್ಲೆ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಂದ್ರ ಜಲಶಕ್ತಿ ಹಾಗೂ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವರಾಗಿರುವ ಬಿಶ್ವೇಶ್ವರ ಟುಡು, ಪರಿಶೀಲನಾ ಸಭೆಯಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇಬ್ಬರು ಅಧಿಕಾರಿಗಳು ಕೆಲ ಕಡತಗಳನ್ನ ತಮ್ಮೊಂದಿಗೆ ತೆಗೆದುಕೊಂಡು ಬಾರದ ಕಾರಣ ಆಕ್ರೋಶಗೊಂಡಿರುವ ಸಚಿವರು, ಅವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಮಯೂರ್ಭಂಜ್ ಜಿಲ್ಲಾ ಯೋಜನೆ ಮತ್ತು ಮೇಲ್ವಿಚಾರಣಾ ಘಟಕದ ಉಪನಿರ್ದೇಶಕ ಅಶ್ವಿನ್ ಕುಮಾರ್ ಮಲ್ಲಿಕ್ ಮತ್ತು ಸಹಾಯಕ ನಿರ್ದೇಶಕ ದೇಬಶಿಶ್ ಮೊಹಾಪಾತ್ರ ಹಲ್ಲೆಗೊಳಗಾಗಿದ್ದು, ಇದೀಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬರಿಪಾದ ಟೌನ್ ಪೊಲೀಸ್ ಠಾಣೆಯಲ್ಲಿ ಇಬ್ಬರು ಅಧಿಕಾರಿಗಳು ದೂರು ದಾಖಲು ಮಾಡಿದ್ದು, ಐಪಿಸಿ ಸೆಕ್ಷನ್ 323, 325, 294 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿರಿ: ನಾಗ್ಪುರ್ದಲ್ಲಿ ಮಹಿಳೆಯರಿಂದ ಬೆತ್ತಲೆ ಡ್ಯಾನ್ಸ್.. ವಿಡಿಯೋ ವೈರಲ್!
ತಮ್ಮ ಮೇಲೆ ನಡೆದಿರುವ ಹಲ್ಲೆಗೆ ಸಂಬಂಧಿಸಿದಂತೆ ಮಾತನಾಡಿರುವ ಅಧಿಕಾರಿಗಳು, ಕೆಲವೊಂದು ಕಡತ ತೆಗೆದುಕೊಂಡು ಬಾರದ ಕಾರಣ ಸಚಿವರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ.
ತಮ್ಮ ಮೇಲೆ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಚಿವರು, ಆರೋಪ ಆಧಾರರಹಿತವಾಗಿದ್ದು, ಸುದ್ದ ಸುಳ್ಳು ಎಂದಿದ್ದಾರೆ.ಅವರೊಂದಿಗೆ ಕೆಲ ಗಂಟೆಗಳ ಕಾಲ ಮಾತನಾಡಿ ಕಳುಹಿಸಿಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ಒಡಿಶಾದ ಮಯೂರ್ಭಂಜ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಿಶ್ವಶ್ವರ್ ಕಳೆದ ಜುಲೈನಲ್ಲಿ ಮೋದಿ ಸಂಪುಟ ಸೇರಿಕೊಂಡಿದ್ದು, ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇದರ ಬೆನ್ನಲ್ಲೇ ಇಂತಹ ಗಂಭೀರ ಆರೋಪ ಕೇಳಿ ಬಂದಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ