ನಾಡಿಯಾ(ಪಶ್ಚಿಮ ಬಂಗಾಳ): 10 ಚಕ್ರಗಳ ಲಾರಿ ಮತ್ತು ಮಾರುತಿ ವ್ಯಾನ್ ಮಧ್ಯೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಐವರು ಸಾವಿಗೀಡಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಸಂಭವಿಸಿದ ಈ ಅಪಘಾತದಲ್ಲಿ ಮಹಿಳೆ, ಇಬ್ಬರು ಮಕ್ಕಳು, ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಡಿಯಾದ ನಕಾಶಿಪಾರಾ ಪೊಲೀಸ್ ಠಾಣೆಯ ರಾಷ್ಟ್ರೀಯ ಹೆದ್ದಾರಿ 34 ರಲ್ಲಿ ಈ ಘಟನೆ ನಡೆದಿದೆ.
ನಕಾಶಿಪಾರ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 34 ರ ಟೋಲ್ ಪ್ಲಾಜಾದಿಂದ ಮಾರುತಿ ಕಾರು ಸ್ವಲ್ಪ ದೂರದಲ್ಲಿದ್ದಾಗ 10 ಚಕ್ರದ ಟ್ರಕ್ ಎದುರು ದಿಕ್ಕಿನಿಂದ ಬರುತ್ತಿತ್ತು ಎಂದು ತಿಳಿದು ಬಂದಿದೆ. ಅತಿವೇಗದ ಕಾರಣ ಎರಡೂ ವಾಹನಗಳು ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿ ಹೊಡೆದಿವೆ. ಮಾರುತಿ ವ್ಯಾನ್ ನಜ್ಜುಗುಜ್ಜಾಗಿದೆ.
ಹತ್ತಿರದಲ್ಲಿ ಹೆಚ್ಚು ಜನ ಇಲ್ಲದ ಕಾರಣದಿಂದ ಸಹಾಯ ಲಭ್ಯವಾಗದೇ ರಕ್ಷಣಾ ಕಾರ್ಯಾಚರಣೆಗೆ ಸಮಯ ಹಿಡಿಯಿತು. ಕೆಲವು ಪಾದಚಾರಿಗಳು ಪ್ರಯಾಣಿಕರನ್ನು ಕಾರಿನಿಂದ ಹೊರತೆಗೆಯಲು ಪ್ರಯತ್ನಿಸಿದರು. ನಕಾಶಿಪಾರಾ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರು ಮಕ್ಕಳು, ಮಹಿಳೆ ಮತ್ತು ಇಬ್ಬರು ಪುರುಷರನ್ನು ರಕ್ತಸಿಕ್ತ ಸ್ಥಿತಿಯಲ್ಲಿ ಹೊರತೆಗೆದಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ಈ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಮತ್ತು ಕೆಲವೊಮ್ಮೆ ದ್ವಿಮುಖದಿಂದ ಏಕಮುಖ ರಸ್ತೆಗಳಿಗೆ ಹೋಗುವಾಗ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಹೇಳುತ್ತಾರೆ. ಮೃತ ದೇಹಗಳನ್ನು ಇನ್ನೂ ಗುರುತಿಸಲಾಗಿಲ್ಲ. ರಸ್ತೆ ಹದಗೆಟ್ಟಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದರೂ, ಪೊಲೀಸರು ಅಪಘಾತಕ್ಕೆ ಕಾರಣ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.