ಸಿದ್ದಿಪೇಟ್(ತೆಲಂಗಾಣ): ಕಾರೊಂದು ಬಾವಿಗೆ ಬಿದ್ದ ಪರಿಣಾಮ ತಾಯಿ, ಮಗ ಸಾವನ್ನಪ್ಪಿದ್ದಾರೆ. ಇವರ ಜೊತೆಗೆ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಈಜುಗಾರ ಕೂಡಾ ಮೃತಪಟ್ಟಿದ್ದಾನೆ.
ಸಿದ್ದಿಪೇಟ್ ಜಿಲ್ಲೆಯ ದುಬ್ಬಾಕ ಮಂಡಲ್ನ ಚಿತ್ತಾಪುರ ಮತ್ತು ಭೂಂಪಲ್ಲಿ ಎಂಬ ಗ್ರಾಮಗಳ ಮಧ್ಯೆ ರಾಮಯಂಪೇಟೆಯಿಂದ ಸಿದ್ದಿಪೇಟ್ ಕಡೆಗೆ ಹೊರಡುತ್ತಿದ್ದ ಕಾರೊಂದು ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಬಾವಿಯೊಳಗೆ ಬಿದ್ದಿದೆ. ಈ ವೇಳೆ, ಮೇದಕ್ ಜಿಲ್ಲೆಯ ನಿಜಾಂಪೇಟ್ ಮಂಡಲದ ನಂದಿಗಾಮ ಗ್ರಾಮದ ತಾಯಿ ಮತ್ತು ಮಗ ಇಬ್ಬರೂ ದುರಂತ ಅಂತ್ಯ ಕಂಡಿದ್ದಾರೆ.
ಈ ಬಗ್ಗೆ ಸ್ಥಳೀಯರ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಕಾರು ಮತ್ತು ಮೃತದೇಹಗಳನ್ನು ಹೊರತೆಗೆಯಲು ಬಾವಿಯೊಳಗೆ ಇಳಿದಿದ್ದ ಈಜುಗಾರ ನರಸಿಂಹಲು ಎಂಬಾತ ಕೂಡಾ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾನೆ.
ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸ್ಥಳೀಯರ ಜೊತೆಗೂಡಿ ಕಾರ್ಯಾಚರಣೆ ನಡೆಸಿದ್ದು, ಬಾವಿಯಲ್ಲಿದ್ದ ನೀರನ್ನು ಮೋಟಾರುಗಳ ಮೂಲಕ ಖಾಲಿ ಮಾಡಿ, ಕ್ರೇನ್ ಸಹಾಯದಿಂದ ಕಾರು ಹಾಗೂ ಮೃತದೇಹಗಳನ್ನು ಹೊರತೆಗೆದರು. ಸ್ಥಳಕ್ಕೆ ಆಗಮಿಸಿದ ಶಾಸಕ ರಘುನಂದನ್ ರಾವ್ ಮೃತರಿಗೆ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಪೊಲೀಸರ ಹೊಡೆತಕ್ಕೆ ಬಲಗೈ ಕಳೆದುಕೊಂಡ ಯುವಕ... ಪೋಷಕರಿಂದ ಗಂಭೀರ ಆರೋಪ