ಚಂಡೀಗಢ: ಬ್ರಿಟಿಷ್ ಕೊಲಂಬಿಯಾದ ಜಂಟಿ ಪಡೆಗಳ ವಿಶೇಷ ಜಾರಿ ಘಟಕವು 11 ದರೋಡೆಕೋರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪೈಕಿ 9 ಮಂದಿ ದರೋಡೆಕೋರರು ಪಂಜಾಬಿಯವರಾಗಿರುವುದು ಅತ್ಯಂತ ಅಚ್ಚರಿಯ ಸಂಗತಿ. ದರೋಡೆಕೋರರ ಬಗ್ಗೆ ಕೆನಡಾ ಎಚ್ಚರಿಕೆ ನೀಡಿದ್ದು, ಆ ವ್ಯಕ್ತಿಗಳಿಂದ ದೂರವಿರುವಂತೆ ವಿಶೇಷ ಜಾರಿ ಘಟಕ ಟ್ವೀಟ್ ಮಾಡಿದೆ.
11 ಜನರ ಪಟ್ಟಿ ಬಿಡುಗಡೆ: ಬ್ರಿಟಿಷ್ ಕೊಲಂಬಿಯಾದ ಜಂಟಿ ಪಡೆಗಳ ವಿಶೇಷ ಜಾರಿ ಘಟಕವು ವ್ಯಾಂಕೋವರ್‌ಪಿಡಿ ಸಹಭಾಗಿತ್ವದಲ್ಲಿ ಸಾರ್ವಜನಿಕ ಸುರಕ್ಷತಾ ಎಚ್ಚರಿಕೆಯನ್ನು ನೀಡಿದೆ. ತೀವ್ರ ಮಟ್ಟದ ಸಾಮೂಹಿಕ ಸಂಘರ್ಷ ಮತ್ತು ಹಿಂಸಾಚಾರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಕಾರಣ ಸಾರ್ವಜನಿಕ ಸುರಕ್ಷತೆಗೆ ಗಮನಾರ್ಹ ಅಪಾಯವನ್ನು ಉಂಟು ಮಾಡುವ 11 ವ್ಯಕ್ತಿಗಳನ್ನು BCRCMP ಗುರುತಿಸಿದೆ. ಈ ಎಲ್ಲ ವ್ಯಕ್ತಿಗಳು ಕೆಳಹಂತದ ಗ್ಯಾಂಗ್ ವಾರ್‌ಗೆ ಸಂಬಂಧಿಸಿದವರು ಎಂದು ಹೇಳಲಾಗುತ್ತಿದೆ.
ಶಕೀಲ್ ಬಸ್ರಾ, ಅಮರ್‌ಪ್ರೀತ್ ಸಮ್ರಾ, ಜಗದೀಪ್ ಚೀಮಾ, ರವೀಂದರ್ ಶರ್ಮಾ, ಬರೀಂದರ್ ಧಲಿವಾಲ್, ಗುರುಪ್ರೀತ್ ಧಲಿವಾಲ್ ಭಾರತದೊಂದಿಗೆ ಸಂಪರ್ಕ ಹೊಂದಿರುವವರಾಗಿದ್ದಾರೆ. ಇವರಲ್ಲದೇ ರಿಚರ್ಡ್ ಜೋಸೆಫ್ ವಿಟ್ಲಾಕ್ ಮತ್ತು ಆಂಡಿ ಸೇಂಟ್ ಪಿಯರೆ ಸಾರ್ವಜನಿಕರ ಸುರಕ್ಷತೆಗೆ ಅಪಾಯಕಾರಿ ಎನ್ನಲಾಗುತ್ತಿದೆ. ಜನರಿಗೆ ಈಗಾಗಲೇ ಈ ಬಗ್ಗೆ ಎಚ್ಚರಿಕೆ ನಿಡಿದ್ದು, ಸಾಧ್ಯವಾದಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ದರೋಡರಕೋರರ ಪಟ್ಟಿಯಲ್ಲಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಘಟಕ ಟ್ವೀಟ್ನಲ್ಲಿ ತಿಳಿಸಿದೆ.
ಈ ದರೋಡೆಕೋರರ ಹೆಸರಿಲ್ಲ: ವಿಶೇಷ ಜಾರಿ ಘಟಕ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ದರೋಡೆಕೋರ ಗೋಲ್ಡಿ ಬ್ರಾರ್ ಮತ್ತು ಮೊಹಾಲಿ ಸ್ಫೋಟ ಪ್ರಕರಣದ ಲಖ್ಬೀರ್ ಸಿಂಗ್ ಲಾಂಡಾ ಹೆಸರು ಸೇರಿಲ್ಲ ಎಂಬುದು ಗಮನಾರ್ಹ.
ಇದನ್ನೂ ಓದಿ : ಮುಂಬೈ: ₹1,400 ಕೋಟಿ ಮೌಲ್ಯದ ಮೆಫೆಡ್ರೊನ್ ಡ್ರಗ್ಸ್ ವಶ, ಐವರ ಬಂಧನ