ಚೆನ್ನೈ: ಕೇಂದ್ರ ಸರ್ಕಾರವನ್ನು ಯೂನಿಯನ್ ಗವರ್ನಮೆಂಟ್ ಅಂತ ಕರೆಯುವುದು ಅಪರಾಧವಲ್ಲ ಮತ್ತು ಒಕ್ಕೂಟ ವ್ಯವಸ್ಥೆ ಪರ ಡಿಎಂಕೆ ಸದಾ ಹೋರಾಡುತ್ತದೆ ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. 16ನೇ ವಿಧಾನಸಭೆಯ ಅಧಿವೇಶನವನ್ನು ಉದ್ದೇಶಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಯಣ ಮೇಲಿನ ಚರ್ಚೆ ವೇಳೆ ಸಿಎಂ ಸ್ಟಾಲಿನ್ ಮಾತನಾಡಿದರು. ಕೇಂದ್ರ ಸರ್ಕಾರವನ್ನು ಯಾಕೆ ನೀವು ಒಂಡ್ರಿಯ ಅರಸ್(ಯೂನಿಯನ್ ಗವರ್ನಮೆಂಟ್) ಎಂದು ಕರೆಯುತ್ತೀರಿ ಎಂದು ಬಿಜೆಪಿ ಶಾಸಕ ನೈನಾರ್ ನಾಗೇಂದ್ರನ್ ಸಿಎಂರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸ್ಟಾಲಿನ್, ಕೇಂದ್ರವನ್ನು ಯೂನಿಯನ್ ಗವರ್ನಮೆಂಟ್ ಎಂಬ ಪದ ಬಳಕೆ ಅಪರಾಧವಲ್ಲ ಎಂದು ಸ್ಪಷ್ಟನೆ ನೀಡಿದರು.
ಯೂನಿಯನ್ ಎಂಬ ಪದವನ್ನು ಬಳಸುವುದು ಸಾಮಾಜಿಕ ಪಾಪವೆಂದು ಯಾರೂ ಯೋಚನೆ ಮಾಡುವ ಅವಶ್ಯಕತೆ ಇಲ್ಲ. ಆದರೆ ಕೆಲವರು ಇಂತಹ ಪದ ಬಳಕೆ ತಪ್ಪು ಎನ್ನುತ್ತಾರೆ ಎಂದು ಬಿಜೆಪಿ ಶಾಸಕ ನಾಗೇಂದ್ರನ್‌ಗೆ ಕಲಾಪದಲ್ಲೇ ತಿರುಗೇಟು ನೀಡಿದರು.
ಇಂಡಿಯಾ ಎಂದರೆ ಭಾರತ ಎಂಬುದನ್ನು ಸಂವಿಧಾನದ ಮೊದಲ ಆರ್ಟಿಕಲ್ ಹೇಳುತ್ತದೆ. ಇದು ರಾಜ್ಯಗಳ ಒಕ್ಕೂಟವಾಗಿರಬೇಕು. ನಾವು ಮಾತ್ರ ಹೀಗೆ ಬಳಸುತ್ತೇವೆ. ಆದರೆ ಕಾನೂನಿನಲ್ಲಿ ಜಾಗವಿಲ್ಲದ ಬೇರೆಯದನ್ನು ನಾವು ಬಳಸುವುದಿಲ್ಲ. ಯೂನಿಯನ್ ತಪ್ಪು ಪದವಲ್ಲ. ಇದು ರಾಜ್ಯಗಳ ಒಕ್ಕೂಟವನ್ನು ಸೂಚಿಸುತ್ತದೆ ಎಂದು ಸಿಎಂ ಸ್ಟಾಲಿನ್ ಸ್ಪಷ್ಟನೆ ನೀಡಿದರು.