ಕೋಲ್ಕತ್ತಾ: ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ ಘೋಷಣೆ ನಂತರ, ಚುನಾವಣೆ ದಿನ ನಡೆದ ಹಿಂಸಾಚಾರದ ಕಿಡಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದ್ದು, ಮುಂಜಾಗ್ರತ ಕ್ರಮವಾಗಿ ಇನ್ನೂ 10 ದಿನಗಳ ಕಾಲ ಕೇಂದ್ರ ಪಡೆಗಳನ್ನು ರಾಜ್ಯದಲ್ಲೇ ಇರಿಸುವ ಕೇಂದ್ರದ ನಿರ್ಧಾರಕ್ಕೆ ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮೊಯ್ ಭಟ್ಟಾಚಾರ್ಯ ಅವರ ವಿಭಾಗೀಯ ಪೀಠ ಕೇಂದ್ರ ಗೃಹ ಸಚಿವಾಲಯಕ್ಕೆ ಈ ಅನುಮೋದನೆ ನೀಡಿದೆ.
'ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ, ಗಲಾಟೆ ನಡೆಯಬಹುದು ಎನ್ನುವಂತಹ ಪ್ರದೇಶಗಳನ್ನು ಗುರುತಿಸಿ, ಆ ಸ್ಥಳಗಳಲ್ಲಿ ಉಳಿದಿರುವ ಕೇಂದ್ರ ಪಡೆಗಳನ್ನು ನಿಯೋಜಿಸಬಹುದು. 10 ದಿನಗಳ ಅವಧಿಗೆ ಕೇಂದ್ರ ಪಡೆ ರಾಜ್ಯದಲ್ಲೇ ಇರಲು ಅವಕಾಶ ನೀಡಿದ್ದು, ಹಂತ ಹಂತವಾಗಿ ಕೇಂದ್ರ ಪಡೆಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರಕ್ಕೆ ಮುಕ್ತ ಅವಕಾಶವಿದೆ' ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
ಕನಿಷ್ಠ 136 ತಂಡಗಳ ಕೇಂದ್ರ ಪಡೆಗಳನ್ನು ಹಂತ ಹಂತವಾಗಿ ಹಿಂಪಡೆಯಲಾಗಿದೆ ಎಂದು ಕೇಂದ್ರದಿಂದ ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಜುಲೈ 8 ರಂದು ನಡೆದ ಮೂರು ಹಂತದ ಪಂಚಾಯತ್ ಚುನಾವಣೆ ಸಂದರ್ಭ ಹೈಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರ ರಾಜ್ಯದಲ್ಲಿ ನಿಯೋಜನೆ ಮಾಡಲು 821 ಕೇಂದ್ರ ಪಡೆಗಳ ತಂಡವನ್ನು ಕಳುಹಿಸಿತ್ತು. ಜೂನ್ 8 ರಂದು ಪಂಚಾಯತ್ ಚುನಾವಣೆ ದಿನಾಂಕಗಳನ್ನು ಘೋಷಿಸಿದ ನಂತರ ರಾಜ್ಯದ ಹಲವು ಭಾಗಗಳಲ್ಲಿ ಹಿಂಸಾಚಾರದ ದೃಷ್ಟಿಯಿಂದ ಹೈಕೋರ್ಟ್ ಕೇಂದ್ರ ಪಡೆಗಳಿಗೆ ಆದೇಶ ನೀಡಿತ್ತು.
ಚುನಾವಣೆಗೂ ಮುನ್ನ ಮನೆಯಿಂದ ಹೊರದಬ್ಬಲ್ಪಟ್ಟವರು ವಾಪಸಾಗುವುದನ್ನು ಖಚಿತಪಡಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ ಹೈಕೋರ್ಟ್, ಪರಿಸ್ಥಿತಿಯ ಮೇಲೆ ನಿಗಾ ಇಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಿದೆ. ಕಿರುಕುಳಕ್ಕೊಳಗಾದ ಇಬ್ಬರು ಮಹಿಳೆಯರು ನ್ಯಾಯಾಲಯದ ಮೊರೆ ಹೋಗುತ್ತಿದ್ದಂತೆ, ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದ ವಿಷಯಗಳಲ್ಲಿ ಸಲ್ಲಿಸಲಾಗುತ್ತಿರುವ ಅರ್ಜಿಗಳು ಮತ್ತು ಪೂರಕ ಅಫಿಡವಿಟ್‌ಗಳ ಸರಣಿ ಬಗ್ಗೆ ಪೀಠ ತನ್ನ ಅಸಮಾಧಾನ ಸೂಚಿಸಿತು.
ಕಳೆದ ಶುಕ್ರವಾರ, ವಕೀಲೆ ಪ್ರಿಯಾಂಕಾ ತಿಬ್ರೆವಾಲ್ ಅವರು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ಅವರ ವಿಭಾಗೀಯ ಪೀಠಕ್ಕೆ ಇನ್ನೂ ನಾಲ್ಕು ವಾರಗಳ ಕಾಲ ರಾಜ್ಯದಲ್ಲಿ ಕೇಂದ್ರ ಪಡೆಗಳನ್ನು ಉಳಿಸಿಕೊಳ್ಳಲು ಆದೇಶ ನೀಡುವಂತೆ ಮನವಿ ಮಾಡಿದ್ದರು. ಆದರೆ, ಮುಖ್ಯ ನ್ಯಾಯಮೂರ್ತಿಗಳ ವಿಭಾಗೀಯ ಪೀಠವು ಈ ಬಗ್ಗೆ ನ್ಯಾಯಾಲಯವು ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ ಮತ್ತು ಕೇಂದ್ರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿತ್ತು.
ರಾಜ್ಯದ ಅಡ್ವೊಕೇಟ್ ಜನರಲ್ ಕೂಡ ಕೇಂದ್ರ ಇನ್ನೂ 10 ದಿನಗಳವರೆಗೆ ಕೇಂದ್ರ ಪಡೆಗಳನ್ನು ಇರಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ. ನ್ಯಾಯಾಲಯವು ಅವಕಾಶ ನೀಡಿದರೆ ರಾಜ್ಯವು ಕೇಂದ್ರ ಪಡೆಗಳೊಂದಿಗೆ ಜವಾಬ್ದಾರಿಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಇದೀಗ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೇಂದ್ರ ಪಡೆ ಪೊಲೀಸರೊಂದಿಗೆ ಸೇರಿ ಭದ್ರತೆ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಹಿಂಸಾಚಾರ: ರಾಜ್ಯಪಾಲರ ಭೇಟಿಯಾದ ಬಿಜೆಪಿ ಸತ್ಯಶೋಧನಾ ತಂಡ