ಕೊಟ್ಟಾಯಂ (ಕೇರಳ): ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ನ ಹಿರಿಯ ನಾಯಕ ದಿ.ಉಮ್ಮನ್ ಚಾಂಡಿ ಅವರ ನಿಧನದಿಂದ ತೆರವಾಗಿದ್ದ ಪುತ್ತುಪ್ಪಲ್ಲಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಾಂಡಿ ಉಮ್ಮನ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಉಮ್ಮನ್ ಚಾಂಡಿ ಪುತ್ರರಾದ ಚಾಂಡಿ ಉಮ್ಮನ್ 36,454 ಮತಗಳ ಅಂತರದಿಂದ ಗೆದ್ದು ತಂದೆಯ ಕ್ಷೇತ್ರ ಉಳಿಸಿಕೊಂಡಿದ್ದಾರೆ.
ಪುತ್ತುಪಲ್ಲಿ ಕ್ಷೇತ್ರದಲ್ಲಿ ಆಡಳಿತಾರೂಢ ಎಲ್‌ಡಿಎಫ್ ಮತ್ತು ಪ್ರತಿಪಕ್ಷ ಯುಡಿಎಫ್ ನಡುವೆ ಪ್ರಮುಖ ಹಣಾಹಣಿ ಏರ್ಪಟ್ಟಿತ್ತು. ಉಮ್ಮನ್ ಚಾಂಡಿ ಅವರ ಉತ್ತರಾಧಿಕಾರಿ ಚಾಂಡಿ ಉಮ್ಮನ್ ಭಾರಿ ಅಂತರದಿಂದ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಲ್ಲದೇ, ಕೇರಳ ವಿಧಾನಸಭೆಗೆ ನಡೆದ ಉಪಚುನಾವಣೆಯ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಚಾಂಡಿ ಉಮ್ಮನ್ ಒಟ್ಟು 78,098 ಮತಗಳನ್ನು ಪಡೆದರೆ, ಇವರ ಸಮೀಪದ ಪ್ರತಿಸ್ಪರ್ಧಿ ಸಿಪಿಐಎಂ ಅಭ್ಯರ್ಥಿ ಜೈಕ್ ಸಿ.ಥಾಮಸ್ 41,644 ಮತಗಳ ಪಡೆದು ಪರಾಭವಗೊಂಡಿದ್ದಾರೆ. ಬಿಜೆಪಿಯಿಂದ ಕಣಕ್ಕಿಳಿದಿದ್ದ ಪಕ್ಷದ ಜಿಲ್ಲಾಧ್ಯಕ್ಷ ಲಿಜಿನ್ ಲಾಲ್ 6,447 ಮತಗಳನ್ನು ಪಡೆದಿದ್ದಾರೆ. ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಸಿಪಿಐಎಂ ಮತ್ತು ಬಿಜೆಪಿಯ ಮತಗಳಲ್ಲಿ ಭಾರಿ ಕುಸಿತ ಕಂಡುಬಂದಿದೆ.
2021ರ ಚುನಾವಣೆಗೆ ಹೋಲಿಸಿದರೆ ಸಿಪಿಐಎಂ 12,800 ಕ್ಕೂ ಹೆಚ್ಚು ಮತಗಳನ್ನು ಕಳೆದುಕೊಂಡಿದೆ. 2021ರಲ್ಲೂ ಸಿಪಿಐಎಂನಿಂದ ಸ್ಪರ್ಧಿಸಿದ್ದ ಜೈಕ್ ಸಿ.ಥಾಮಸ್ 54,328 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಬಿಜೆಪಿ ಒಟ್ಟು 11,694 ಮತಗಳನ್ನು ಬುಟ್ಟಿಗೆ ಹಾಕಿಕೊಂಡು ಗಮನ ಸೆಳೆದಿತ್ತು. ಆದರೆ, ಈ ಬಾರಿ ಬಿಜೆಪಿ ಸಹ 5,400 ಮತಗಳನ್ನು ಕಳೆದುಕೊಂಡಿದೆ.
ಕಳೆದ 53 ವರ್ಷಗಳಿಂದ ಪುತ್ತುಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಉಮ್ಮನ್ ಚಾಂಡಿ ಜುಲೈ 18ರಂದು ನಿಧನ ಹೊಂದಿದ್ದರು. ಹೀಗಾಗಿ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿತ್ತು. ಕೇರಳ ವಿಧಾನಸಭಾ ಚುನಾವಣೆ ಇತಿಹಾಸದಲ್ಲಿ ಅತಿ ಹೆಚ್ಚು ಅಂತರದ ಗೆಲುವುಗಳಲ್ಲಿ ಒಂದಾಗಿದೆ. 2021ರಲ್ಲಿ ಸಿಪಿಐಎಂ ನಾಯಕಿ ಕೆ. ಶೈಲಜಾ 60,963 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಹಾಲಿ ಸಿಎಂ ಪಿಣರಾಯಿ ವಿಜಯನ್ ಅವರ ಕ್ಷೇತ್ರದಿಂದ 50,123 ಮತಗಳ ಅಂತರದಿಂದ ಜಯ ಗಳಿಸಿದ್ದರು.
ಉಪಚುನಾವಣೆ ಇತಿಹಾಸ: 2005ರ ಕೂತುಪರಂಬ ಉಪಚುನಾವಣೆಯಲ್ಲಿ ಸಿಪಿಐಎಂನ ಪಿ.ಜಯರಾಜನ್ ಅವರಿಗೆ 45,865 ಮತಗಳ ಅಂತರದ ಜಯ ಲಭಿಸಿತ್ತು. ಈಗ ಚಾಂಡಿ ಉಮ್ಮನ್ 36,454 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಒಟ್ಟು 140 ಸದಸ್ಯರ ಕೇರಳ ವಿಧಾನಸಭೆಯಲ್ಲಿ ಎಲ್‌ಡಿಎಫ್ 99 ಶಾಸಕರು ಮತ್ತು ಯುಡಿಎಫ್ 41 ಸದಸ್ಯರನ್ನು ಹೊಂದಿದೆ.
ಇದನ್ನೂ ಓದಿ: I.N.D.I.A vs ಬಿಜೆಪಿ: 7 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ, ಯಾರಿಗೆ ಗೆಲುವು?