ಇಂದ್ರಪುರಿ(ನವದೆಹಲಿ): ರಾಷ್ಟ್ರ ರಾಜಧಾನಿ ದೆಹಲಿಯ ಇಂದ್ರಪುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಉದ್ಯಮಿಯೋರ್ವ ಪತ್ನಿ ಹಾಗೂ ಆಕೆಯ ಕುಟುಂಬಕ್ಕೆ ಥೇಲಿಯಂ ವಿಷ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಫಿಶ್ ಕರಿಯಲ್ಲಿ ಥೇಲಿಯಂ ವಿಷ ಹಾಕಿ ಪತ್ನಿ, ಆಕೆಯ ತಾಯಿ, ನಾದಿನಿಗೆ ನೀಡಿದ್ದು, ಅತ್ತೆ, ನಾದಿನಿ ಸಾವನ್ನಪ್ಪಿದ್ದಾರೆ. ಸದ್ಯ ಪತ್ನಿ ಕೋಮಾದಲ್ಲಿದ್ದಾರೆ. ಈ ಘಟನೆ ನಡೆದಿದ್ದು ಮಾತ್ರ ಫೆಬ್ರವರಿಯಲ್ಲಿ. ಮಾವನಿಂದ ಈ ಪ್ರಕರಣದ ಮಾಹಿತಿ ಹೊರಬಿದ್ದಿದೆ.
ತನಗಾದ ಅವಮಾನದ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ವರುಣ್ ಅರೋರಾ ಈ ಕೃತ್ಯವೆಸಗಿದ್ದಾನೆಂದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ. ಕಳೆದ ಜನವರಿ ತಿಂಗಳಲ್ಲಿ ಪತ್ನಿ ಕುಟುಂಬ ಭೇಟಿ ಮಾಡಿದ್ದ ವರುಣ್, ಆ ವೇಳೆ ಫಿಶ್ ಕರಿ ತೆಗೆದುಕೊಂಡು ಹೋಗಿದ್ದನು. ಅದರಲ್ಲೇ ಥೇಲಿಯಂ ಹಾಕಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ!?
ವರುಣ್ ಅರೋರಾ ಮಾವ ದೇವೇಂದ್ರ ಹೋಮಿಯೋಪಥಿ ಔಷಧಿ ತಯಾರಕರಾಗಿದ್ದು, ಪೊಲೀಸ್ ಠಾಣೆಯಲ್ಲಿ ಮಾರ್ಚ್ 21ರಂದು ದೂರು ದಾಖಲು ಮಾಡಿದ್ದರು. ಈ ವೇಳೆ ನನ್ನ ಪತ್ನಿ ಗಂಗಾರಾಮ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಇದರ ಹಿಂದೆ ಅಳಿಯನ ಕೈವಾಡವಿದೆ ಎಂಬುದು ನನ್ನ ಅನುಮಾನ ಎಂದು ತಿಳಿಸಿದ್ರು. ಜತೆಗೆ ಆಕೆ ಅನಾರೋಗ್ಯದ ವೇಳೆ ಥೇಲಿಯಂ ಸೇವನೆ ಮಾಡಿದ ವೇಳೆ ಕಂಡು ಬರುವ ರೋಗ ಲಕ್ಷಣ ಕಾಣಿಸಿಕೊಂಡಿದ್ದವು ಎಂದಿದ್ದರು.
ದೂರು ನೀಡುತ್ತಿದ್ದಂತೆ ವರುಣ್ನನ್ನ ಬಂಧನ ಮಾಡಿ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯಾಂಶ ಬಹಿರಂಗಗೊಂಡಿದ್ದು, ತಾವು ಪತ್ನಿ ದಿವ್ಯಾ, ನಾದಿನಿ ಪ್ರಿಯಾಂಕಾ, ಅತ್ತೆಗೆ ಥೇಲಿಯಂ ಹಾಕಿದ್ದಾಗಿ ಹೇಳಿದ್ದಾನೆ. 22 ಸಾವಿರ ರೂ. ನೀಡಿ ದೆಹಲಿ ಹೊರಗಿನಿಂದ ಇದನ್ನ ಖರೀದಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಜತೆಗೆ ಆತನ ಬಳಿಯಿಂದ ಥೇಲಿಯಂ ವಶಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ.