ಗಿರಿದಿಹ್ (ಜಾರ್ಖಂಡ್): ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ಆಗಸ್ಟ್ 5ರಂದು ಸಂಭವಿಸಿದ ಭೀಕರ ಬಸ್ ಅಪಘಾತದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಅಚ್ಚರಿಗೊಳಗಾಗಿದ್ದಾರೆ. ವಿಮೆ ಪಾಲಿಸಿಯಲ್ಲಿ ಬಸ್ ಅನ್ನು ದ್ವಿಚಕ್ರ ವಾಹನವೆಂದು ಉದ್ದೇಶಪೂರ್ವಕವಾಗಿ ತಪ್ಪಾಗಿ ನಮೂದಿಸಿರುವುದು ಕಂಡುಬಂದಿದೆ. ಇದರ ಪರಿಣಾಮ ಎಲ್ಲ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿರುವುದು ಮಾತ್ರವಲ್ಲದೇ, ಮೃತರು ಮತ್ತು ಗಾಯಗೊಂಡ ವ್ಯಕ್ತಿಗಳು ಸರಿಯಾದ ರೀತಿಯಲ್ಲಿ ವಿಮೆ ಕ್ಲೈಮ್ ಮಾಡಿಕೊಳ್ಳುವುದರಿಂದ ವಂಚಿತರಾಗಿದ್ದಾರೆ.
ನದಿಗೆ ಬಿದ್ದ ಬಸ್: ಆಗಸ್ಟ್ 5ರ ಸಂಜೆ ರಾಂಚಿಯಿಂದ ಗಿರಿದಿಹ್‌ಗೆ ತೆರಳುತ್ತಿದ್ದ ಬಸ್ ಬರಾಕರ್ ನದಿಗೆ ಉರುಳಿತ್ತು. ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು. ಬಸ್ನಿರ್ವಹಿಸಲು ಅಗತ್ಯವಿರುವ ಹಣ ಪಾವತಿಸುವುದನ್ನು ತಪ್ಪಿಸಲು, ಬಸ್ ಮಾಲೀಕರು ದ್ವಿಚಕ್ರ ವಾಹನ ವಿಮೆ ಎಂದು ನಮೂದಿಸುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತನಿಖೆಯ ಸಂದರ್ಭದಲ್ಲಿ ಜೆಹೆಚ್ 07 ಹೆಚ್ 2906 ನೋಂದಣಿ ಸಂಖ್ಯೆಯ ಬಸ್ 1130003123010240021524 ನಂಬರ್ನ ವಿಮಾ ಪಾಲಿಸಿ ಹೊಂದಿರುವುದು ಗೊತ್ತಾಗಿದೆ.
ಬಸ್‌ಗೆ ಸ್ಕೂಟರ್ ವಿಮೆ!: ಈ ಪಾಲಿಸಿಯು ಅದೇ ನೋಂದಾಯಿತ ಸಂಖ್ಯೆಗೆ ಸಂಬಂಧಿಸಿದ ಸ್ಕೂಟರ್‌ಗಾಗಿ ಪ್ರೀಮಿಯರ್ ಇನ್ಶೂರೆನ್ಸ್ ಕಂಪನಿ ನೀಡಿದ ಪಾಲಿಸಿಯಾಗಿದೆ. ಅಚ್ಚರಿಯ ಸಂಗತಿಯೆಂದರೆ, ಪಾಲಿಸಿಯಲ್ಲಿ ಪಂಕಜ್ ಕುಮಾರ್ ಎಂಬ ಹೆಸರಿದೆ. ಅಪಘಾತಕ್ಕೀಡಾದ ಬಸ್ ರಾಜು ಖಾನ್ ಹೆಸರಿನಲ್ಲಿ ನೋಂದಣಿಯಾಗಿದೆ. ಈ ಮಾಹಿತಿ ಬೆಳಕಿಗೆ ಬಂದ ನಂತರ ಜಿಲ್ಲಾಧಿಕಾರಿ ನಮನ್ ಪ್ರಿಯೇಶ್ ಲಕ್ಡಾ ಅವರು ತಕ್ಷಣ ವಿವರವಾದ ತನಿಖೆಗೆ ಆದೇಶಿಸಿದ್ದಾರೆ. ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.
ವಕೀಲರು ಹೇಳಿದ್ದೇನು?: ರಸ್ತೆಯಲ್ಲಿ ಸಂಚರಿಸುವ ಬಸ್‌ಗೆ ಪಾವತಿಸಬೇಕಾದ ಕೆಲವು ತೆರಿಗೆಗಳನ್ನು ತಪ್ಪಿಸಲು ಮಾಲೀಕರು ಈ ರೀತಿಯ ಕೆಟ್ಟ ಕೆಲಸಗಳನ್ನು ಮಾಡಿದ್ದಾರೆ ಎಂದು ವಕೀಲ ಪ್ರವೀಣ್ ಕುಮಾರ್ ಹೇಳಿದರು. ಬಸ್ ಮಾಲೀಕರು ವಿಮೆ ವಂಚನೆ ಮಾಡಿರುವುದು ಸ್ಪಷ್ಟ ಎಂದು ಅವರು ತಿಳಿಸಿದ್ದಾರೆ.
''ಬಸ್‌ಗೆ ಸ್ಕೂಟರ್‌ನ ವಿಮೆ ಮಾಡಿದ್ದಾರೆ. ಇದರಿಂದ ಅಪಘಾತದಲ್ಲಿ ಸತ್ತವರ ಮತ್ತು ಗಾಯಗೊಂಡವರ ಕುಟುಂಬಗಳು ವಿಮಾ ಪ್ರಯೋಜನಗಳನ್ನು ಪಡೆಯಲು ತೊಂದರೆ ಎದುರಿಸಬಹುದು. ವಿಮಾ ದಾಖಲಾತಿಯ ವ್ಯತ್ಯಾಸ ಸಂತ್ರಸ್ತರ ಕುಟುಂಬಗಳಿಗೆ ಕಾನೂನು ತೊಡಕುಗಳು ಮತ್ತು ಆರ್ಥಿಕ ಸಂಕಷ್ಟಗಳಿಗೆ ಕಾರಣವಾಗಬಹುದು" ಎನ್ನುವುದು ವಕೀಲರ ಅಭಿಪ್ರಾಯ.
ಸಮಾಜ ಸೇವಕ ಹಾಗೂ ವಕೀಲ ಪ್ರಭಾಕರ್ ಮಾತನಾಡಿ, ''ಪ್ರತಿ ವಾಹನಕ್ಕೆ ಥರ್ಡ್ ಪಾರ್ಟಿ ವಿಮೆ ಇರಬೇಕೆಂಬ ಕಾನೂನಿದೆ. ಅಪಘಾತಕ್ಕೀಡಾದ ಬಸ್‌ಗೆ ಅಂದಾಜು 60 ಸಾವಿರ ರೂ. ಪ್ರೀಮಿಯಂ ಇದೆ. ಈ ಪ್ರೀಮಿಯಂ ಪಾವತಿಸುವುದನ್ನು ತಪ್ಪಿಸಲು ಅನೇಕ ವ್ಯಕ್ತಿಗಳು ಇಂತಹ ಅಕ್ರಮ ಮಾಡುತ್ತಿರುತ್ತಾರೆ" ಎಂದರು.
ಪರಿಹಾರ ಲೆಕ್ಕಾಚಾರ ಹೇಗಿರುತ್ತದೆ?: ಬಸ್‌ಗೆ ವಿಮೆ ಮಾಡಿದ್ದರೆ, ಮೃತರು ಮತ್ತು ಗಾಯಗೊಂಡಿರುವ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗುತ್ತಿತ್ತು ಎಂದು ವಕೀಲ ಕುಮಾರ್ ಒತ್ತಿ ಹೇಳಿದರು. "ಡೆತ್ ಕ್ಲೈಮ್ ಸಂದರ್ಭದಲ್ಲಿ, ಪರಿಹಾರದ ಲೆಕ್ಕಾಚಾರವು 60 ವರ್ಷ ವಯಸ್ಸಿನವರೆಗೆ ಉಳಿದಿರುವ ವರ್ಷಗಳ ಸಂಖ್ಯೆಯನ್ನು ವರ್ಷಕ್ಕೆ 180 ದಿನಗಳಿಂದ ಗುಣಿಸಲಾಗುತ್ತದೆ. ನಂತರ ಈ ಮೊತ್ತವನ್ನು ಫಲಾನುಭವಿಗಳಿಗೆ ನೀಡಲಾಗುತ್ತದೆ. ಸತ್ತವರು ಯಾವುದೇ ಕೆಲಸದಲ್ಲಿ ತೊಡಗಿಲ್ಲದ ಸಂದರ್ಭಗಳಲ್ಲಿ ಉದ್ಯೋಗ, ಕನಿಷ್ಠ ವೇತನವನ್ನು ವರ್ಷಕ್ಕೆ 180 ದಿನಗಳಿಂದ ಗುಣಿಸಿ ಲೆಕ್ಕಹಾಕಿ ಹೆಚ್ಚುವರಿ ಐದು ಲಕ್ಷಗಳನ್ನು ನೀಡಲಾಗುತ್ತದೆ" ಎಂದು ಹೇಳಿದ ವಕೀಲರು, "ಅಪ್ರಾಪ್ತರಿಗೆ ಪರಿಹಾರದ ಮೊತ್ತವನ್ನು ವಿಭಿನ್ನವಾಗಿ ಲೆಕ್ಕ ಹಾಕಲಾಗುತ್ತದೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಆರೋಪ; 4 ಪ್ರತ್ಯೇಕ ತನಿಖಾ ಸಮಿತಿ ರಚಿಸಿ ಸರ್ಕಾರ ಆದೇಶ