ಗಿರಿದಿಹ್ (ಜಾರ್ಖಂಡ್): ಇಲ್ಲಿಯ ಘೋಸ್ ಗ್ರಾಮದಿಂದ ಹಠಾತ್ತನೆ ನಾಪತ್ತೆಯಾಗಿದ್ದ ಅಕಾಲಿ ದೇವಿ ಎಂಬ ವಿಧವೆಯೊಬ್ಬಳು, 20 ವರ್ಷಗಳ ಬಳಿಕ ಇದ್ದಕ್ಕಿದ್ದಂತೆ ಪ್ರತ್ಯಕ್ಷಳಾಗುವ ಮೂಲಕ ಗಂಡನ ಮನೆಯವರಿಗೆ ಶಾಕ್ ನೀಡಿದ್ದಾಳೆ. ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ತನ್ನನ್ನು ಮಾರಾಟ ಮಾಡಿದ್ದರು ಎಂದು ಆರೋಪ ಮಾಡಿರುವ ಅಕಾಲಿ ದೇವಿ, ಸದ್ಯ ಎಂಟು ಜನರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ಸಂಬಂಧ ದೂರು ಸಹ ನೀಡಿದ್ದಾಳೆ. ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸರು ಎಂಟು ಮಂದಿ ವಿರುದ್ಧ ಎಫ್‌ಐಆರ್ ಕೂಡಾ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
8 ಜನರ ವಿರುದ್ಧ ದೂರು- ಪೊಲೀಸರ ಮಾಹಿತಿ : ಘೋಸ್ಸೆ ಗ್ರಾಮದ ಬುಲ್ಲು ಯಾದವ್, ಸರಯು ಯಾದವ್, ದರೋಗಿ ಯಾದವ್, ರಾಮಚರಿತ್ರಾ ಯಾದವ್, ಕಾಮೇಶ್ವರ್ ಯಾದವ್, ದುಖಾನ್ ಯಾದವ್, ಮಿತನ್ ಯಾದವ್ ಮತ್ತು ಗೋಪಾಲ್ ಯಾದವ್ ವಿರುದ್ಧ ದಿಯೋರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವುದಾಗಿ ಠಾಣೆಯ ಪ್ರಭಾರಿ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ದೂರಿನಲ್ಲಿ ದಾಖಲಾದ ಮಾಹಿತಿ ಹೀಗಿದೆ: ಮಹಾವೀರ್ ಯಾದವ್ ನನ್ನ ಪತಿಯಾಗಿದ್ದು ಕೆಲವು ವರ್ಷಗಳ ಹಿಂದೆಯೇ ನಿಧನರಾದರು. ಆದರೆ, ಪತಿ ತೀರಿಕೊಂಡ ತಕ್ಷಣ ಈ ಆರೋಪಿಗಳು ಸಂಚು ರೂಪಿಸಿ ನಮ್ಮ ಪಾಲಿನ ಜಮೀನನ್ನು ಕಬಳಿಸಲು ಯೋಜನೆ ರೂಪಿಸಿದ್ದರು. ತನ್ನನ್ನು ಸೇರಿದಂತೆ ತನ್ನ ಅಪ್ರಾಪ್ತ ಮಕ್ಕಳಿಬ್ಬರನ್ನೂ ಸೆರೆಹಿಡಿದು 50 ಸಾವಿರ ರೂಪಾಯಿಗೆ ಅಕ್ಕಪಕ್ಕದ ಗ್ರಾಮದವರಿಗೆ ಒತ್ತೆಯಾಳಾಗಿ ಇರಿಸಿದ್ದರು. ಹೇಗೋ ಅಲ್ಲಿಂದ ಪಾರಾಗಿ ಗಂಡನ ಮನೆಗೆ ಬಂದೆವು.
ಆದರೆ, ಬರುತ್ತಿದ್ದಂತೆ ನನ್ನ ದೇಹಕ್ಕೆ ಬೆಂಕಿ ಹಚ್ಚಿ ಕೊಲ್ಲಲು ಪ್ರಯತ್ನಿಸಿದರು. ಅಕ್ಕ-ಪಕ್ಕದ ಜನರು ನನ್ನನ್ನು ಉಳಿಸಿದರು. ತನ್ನ ಪಾಲಿನ ಆಸ್ತಿ ಕೇಳಿದರೆ ಮತ್ತೆ ಮನೆಯಿಂದ ಹೊರ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಕಾಲಿ ದೇವಿ ಸ್ಥಳೀಯ ಪೊಲೀಸರ ಮೊರೆ ಹೋಗಿದ್ದಾರೆ. ಸದ್ಯ ಅವರು ನೀಡಿದ ದೂರಿನ ಪ್ರಕಾರ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
ಮಹಿಳೆ ಆರೋಪಗಳನ್ನು ತಳ್ಳಿಹಾಕಿದ ಆರೋಪಿಗಳು: ಮಹಿಳೆ ದಾಖಲಿಸಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಆರೋಪಿ ರಾಮಚರಿತ್ರಾ ಯಾದವ್, ಮಹಿಳೆ ಮಾಡಿರುವ ಎಲ್ಲ ಆರೋಪಗಳು ನಿರಾಧಾರ. ಇಪ್ಪತ್ನಾಲ್ಕು ವರ್ಷಗಳ ಹಿಂದೆ ಅಕಾಲಿದೇವಿ ಎಂಬುವರು ಜಮೀನು ನೋಂದಣಿ ಮಾಡಿಸಿಕೊಂಡಿದ್ದು, ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಉತ್ತರ ಪ್ರದೇಶದ ಬಿಜೆಪಿ ಶಾಸಕರ ಪತ್ನಿ 24 ಗಂಟೆಗಳ ನಂತರ ಪತ್ತೆ!