ನವದೆಹಲಿ: ವಿವಾದಿತ 'ಬುಲ್ಲಿ ಬಾಯಿ ಆ್ಯಪ್' ಸೃಷ್ಟಿಕರ್ತ ನೀರಜ್ ಬಿಷ್ಣೋಯ್ ಜಾಮೀನು ಅರ್ಜಿಯನ್ನು ದೆಹಲಿಯ ಸೆಷನ್ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಬಿಷ್ಣೋಯ್ ಸೋಮವಾರ ಅರ್ಜಿ ಸಲ್ಲಿಸಿದ್ದರು.
21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ, ಬಿಷ್ಣೋಯ್ ಗಿಟ್‌ಹಬ್‌ನಲ್ಲಿ ಬುಲ್ಲಿ ಬಾಯಿ ಅಪ್ಲಿಕೇಶನ್‌ನ ಸೃಷ್ಟಿಕರ್ತ. ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸುವ, ಸೈಬರ್ ಬುಲ್ಲಿಂಗ್ ಮತ್ತು ಕಿರುಕುಳ ನೀಡುವ ಅಪ್ಲಿಕೇಶನ್‌ನ ಮುಖ್ಯ ಟ್ವಿಟರ್ ಖಾತೆದಾರ ಎಂದು ಹೇಳಲಾಗುತ್ತಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಪ್ರಕರಣ ಸಂಬಂಧ ಜ. 5 ರಂದು ಅಸ್ಸಾಂನ ಜೋರ್ಹತ್‌ನಿಂದ ದೆಹಲಿ ವಿಶೇಷ ಗುಪ್ತಚರ ಪೊಲೀಸ್ ಮತ್ತು ಕಾರ್ಯಾಚರಣೆ ಘಟಕ (IFSO) ಆರೋಪಿಯನ್ನು ಬಂಧಿಸಿದೆ. ಹೆಚ್ಚುವರಿ ಸೆಷನ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಇಂದು ಬಿಷ್ಣೋಯಿ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಲಿದ್ದಾರೆ.
ಜಾಮೀನು ನಿರಾಕರಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ : ಇದಕ್ಕೂ ಮೊದಲು, ಜ.13 ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರೋಪಿಗಳು ತಯಾರಿಸುತ್ತಿರುವ ಈ ಆ್ಯಪ್‌ನಲ್ಲಿ ಅವಹೇಳನಕಾರಿ ವಿಷಯಗಳು ಹಾಗೂ ಮಹಿಳೆಯರ ವಿರುದ್ಧ ನಿಂದನೆಯ ಅಭಿಯಾನವನ್ನು ನಡೆಸಲಾಗಿದೆ ಎಂಬ ಕಾರಣದಿಂದಾಗಿ ನೀರಜ್ ಬಿಷ್ಣೋಯ್ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಆರೋಪದ ಅಗಾಧತೆ ಮತ್ತು ತನಿಖೆಯ ಹಂತವನ್ನು ಪರಿಗಣಿಸಿ, ಈ ಹಂತದಲ್ಲಿ ಜಾಮೀನು ನೀಡಲು ಯಾವುದೇ ಕಾರಣವಿಲ್ಲ ಎಂದು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಂಕಜ್ ಶರ್ಮಾ ಹೇಳಿದ್ದರು.
ಇದನ್ನೂ ಓದಿ: Bulli Bai case: ಪ್ರಚಾರ ಗಿಟ್ಟಿಸಿಕೊಳ್ಳುವುದೇ ಮಾಸ್ಟರ್ ಮೈಂಡ್ ಉದ್ದೇಶವಂತೆ!
ಅವಮಾನಿಸುವ ಉದ್ದೇಶದಿಂದ ಆ್ಯಪ್ ರಚನೆ: ಸಮಾಜದಲ್ಲಿ ಪ್ರಸಿದ್ಧರಾಗಿರುವ ನಿರ್ದಿಷ್ಟ ಸಮುದಾಯದ ಮಹಿಳಾ ಪತ್ರಕರ್ತರು ಮತ್ತು ಸೆಲೆಬ್ರಿಟಿಗಳನ್ನು ಗುರಿಯಾಗಿಟ್ಟುಕೊಂಡು ಅವರನ್ನು ಅವಮಾನಿಸುವ ಉದ್ದೇಶದಿಂದ ಆರೋಪಿಗಳು ಬುಲ್ಲಿಬಾಯಿ ಎಂಬ ಆ್ಯಪ್ ರಚಿಸಿದ್ದರು ಎಂಬ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ.
ಏನಿದು'ಬುಲ್ಲಿ ಬಾಯಿ' ಆ್ಯಪ್: ವಿವಿಧ ಸಾಮಾಜಿಕ ಮಾಧ್ಯಮಗಳಿಗೆ ಭೇಟಿ ನೀಡಿ ಮುಸ್ಲಿಂ ಮಹಿಳೆಯರ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಅವರ ಭಾವಚಿತ್ರಗಳನ್ನು ಸಂಗ್ರಹಿಸಿ ಈ ಆ್ಯಪ್‌ನಲ್ಲಿ ತಿರುಚಿದ ಹಾಗೂ ಅಸಹ್ಯಕರ ಫೋಟೋಗಳನ್ನು ಅಪ್ಲೋಡ್ ಮಾಡುವುದಾಗಿದೆ. ಹೀಗೆ ಫೋಟೋಗಳನ್ನ ಅಪ್ಲೋಡ್ ಮಾಡಿದ ಬಳಿಕ ಜನರು ಇಲ್ಲಿ 'ಹರಾಜು' ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಉತ್ತೇಜಿಸಲಾಗುತ್ತಿತ್ತು ಎನ್ನಲಾಗಿದೆ.
2021 ರಲ್ಲಿ ಅಪ್ಲಿಕೇಶನ್ ರಚನೆ: ದೆಹಲಿ ಪೊಲೀಸರು ವಿಚಾರಣೆಯ ಸಮಯದಲ್ಲಿ, ನೀರಜ್ ಬಿಷ್ಣೋಯ್, ಈ ಅಪ್ಲಿಕೇಶನ್ ಅನ್ನು ನವೆಂಬರ್ 2021 ರಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಬಾಯ್ಬಿಟ್ಟಿದ್ದು, ಡಿಸೆಂಬರ್ 21 ರಲ್ಲಿ ಈ ಆ್ಯಪ್ ನವೀಕರಿಸಲಾಗಿದೆ ಎಂದು ಬಹಿರಂಗಪಡಿಸಿದ್ದಾನೆ. ಅಲ್ಲದೇ ಅವರು ಅಪ್ಲಿಕೇಶನ್ ಬಗ್ಗೆ ಮಾತನಾಡಲು ಮತ್ತೊಂದು ಟ್ವಿಟರ್ ಖಾತೆಯನ್ನು ರಚಿಸಿದ್ದಾಗಿಯೂ ವಿಚಾರಣೆ ವೇಳೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಇನ್ನು ಬುಲ್ಲಿ ಬಾಯಿ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ, ಉತ್ತರಾಖಂಡದ ಯುವತಿ ಮತ್ತು ಆಕೆಯ ಸ್ನೇಹಿತರೊಬ್ಬರನ್ನು ಮುಂಬೈ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಇದನ್ನೂ ಓದಿ: ಸುಲ್ಲಿ ಡೀಲ್ಸ್ 'ಹರಾಜು' ಆ್ಯಪ್ ಸೃಷ್ಟಿಕರ್ತನ ಬಂಧಿಸಿದ ದೆಹಲಿ ವಿಶೇಷ ಪೊಲೀಸ್