ನವದೆಹಲಿ: ಶನಿವಾರ ಮುಂಜಾನೆ 4 ಗಂಟೆ ಸುಮಾರಿಗೆ ಮಾರುಕಟ್ಟೆವೊಂದರ ಅಂಗಡಿಗಳಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತೀವ್ರತೆಯಿಂದಾಗಿ ಮೂರು ಕಟ್ಟಡಗಳ ಪೈಕಿ ಕಟ್ಟಡವೊಂದು ನೆಲಕ್ಕುರುಳಿದ ಘಟನೆ ಉತ್ತರ ದೆಹಲಿಯ ಆಜಾದ್ ನಗರದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಆಜಾದ್ ನಗರದ ಮಾರ್ಕೆಟ್ನ ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿ ಅಂಗಡಿ, ಮನೆ, ವಾಹನಗಳಿಗೂ ವ್ಯಾಪಿಸಿದೆ. ನೋಡು-ನೋಡುತ್ತಲೇ ಬೆಂಕಿ ಕೆನ್ನಾಲಿಗೆ ಮುಗಿಲಿಗೆ ಮುಟ್ಟುವಂತೆ ಕಾಣಿಸಿದೆ. ಬೆಂಕಿಯಿಂದ ಕಾರೊಂದು ಸುಟ್ಟು ಭಸ್ಮವಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ವಿವಿಧ ಅಗ್ನಿಶಾಮಕ ಠಾಣೆಗಳಿಂದ 36ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿವೆ. ನೂರಾರು ಸಿಬ್ಬಂದಿಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಹಲವು ಗಂಟೆಗಳ ನಂತರ ಬೆಂಕಿ ಹತೋಟಿಗೆ ಬಂದಿದೆ. ಘಟನಾ ಸ್ಥಳಕ್ಕೆ ಹಿಂದೂ ರಾವ್ ಪೊಲೀಸ್ ಠಾಣೆಯ ಪೊಲೀಸ್ ತಂಡ ಮತ್ತು ಸಿವಿಲ್ ಡಿಫೆನ್ಸ್ ತಂಡ ದೌಡಾಯಿಸಿದ್ದವು. ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.