ಝಾನ್ಸಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ನಡೆದ ಎಮ್ಮೆಯೊಂದರ ಶವಯಾತ್ರೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಗ್ರಾಮಸ್ಥರು ವಾದ್ಯ ತಂಡಗಳೊಂದಿಗೆ ಕಳೇಬರವನ್ನು ಜೆಸಿಬಿಯಲ್ಲಿಟ್ಟು ಮೆರವಣಿಗೆಯಲ್ಲಿ ಕೊಂಡೊಯ್ದರು. ಬಳಿಕ ಹಿಂದೂ ಪದ್ಧತಿಯಂತೆ ಅಂತ್ಯಸಂಸ್ಕಾರ ನೆರವೇರಿಸಿದರು.
ಝಾನ್ಸಿ ಜಿಲ್ಲೆಯ ಸಂತಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಛೋಟಾ ಬೆಲ್ಮಾ ಗ್ರಾಮದಲ್ಲಿ ಎಮ್ಮೆಗೆ ಗ್ರಾಮಸ್ಥರು ಭಾವಪೂರ್ಣ ವಿದಾಯ ಹೇಳಿದರು. ಇದರ ದೃಶ್ಯಗಳು ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಯಾಗಿವೆ. ಈ ಸಂದರ್ಭದಲ್ಲಿ ಜನರು ಕಣ್ಣೀರು ಸುರಿಸುತ್ತಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು.
ಕರಸ್ ದೇವ್ ಮಹಾರಾಜ್ (ಭೋಲಾ) ಎಂಬ ಹೆಸರಿನ ಬಿಡಾಡಿ ಎಮ್ಮೆ ಇದಾಗಿದೆ. ಗ್ರಾಮದಲ್ಲಿ ಯಾವಾಗಲೂ ಇದು ತಿರುಗಾಡುತ್ತಿತ್ತು. ಎಮ್ಮೆಯನ್ನು ಇಡೀ ಗ್ರಾಮದ ಜನರು ನಿತ್ಯವೂ ನೋಡುತ್ತಿದ್ದರು. ಆದರೆ, ಬುಧವಾರ ಹಠಾತ್ ಸಾವನ್ನಪ್ಪಿತ್ತು.
ಬೆಳಗ್ಗೆ ಸಾವಿನ ಸುದ್ದಿ ತಿಳಿದು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು. ಕೊನೆಯ ಬಾರಿಗೆ ಎಮ್ಮೆಯನ್ನು ನೋಡಲೆಂದು ಅನೇಕರು ಬರಲಾರಂಭಿಸಿದ್ದರು. ನಂತರ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಲು ನಿರ್ಧರಿಸಿದ್ದರು.
ಹಿಂದೂ ಪದ್ಧತಿಯ ಪ್ರಕಾರ ಎಮ್ಮೆಯ ಶವವನ್ನು ಗುಂಡಿ ತೋಡಿ ಹೂಳುವುದು ಹಾಗೂ ಮೆರವಣಿಗೆಯಲ್ಲಿ ಕೊಂಡೊಯ್ಯುವುದಕ್ಕೆ ತೀರ್ಮಾನಿಸಿದರು. ಅಂತೆಯೇ, ಅಂತ್ಯಕ್ರಿಯೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಗ್ರಾಮಕ್ಕೆ ವಾದ್ಯ ತಂಡಗಳು ಹಾಗೂ ಜೆಸಿಬಿಯನ್ನೂ ಕರೆಸಿದ್ದರು.
ಇದಲ್ಲದೇ, ಮೃತ ಎಮ್ಮೆಗೆ ಗ್ರಾಮಸ್ಥರು ಸ್ನಾನ ಮಾಡಿಸಿ, ಪೂಜೆ ಸಲ್ಲಿಸಿ ಹೂವಿನ ಹಾರಗಳನ್ನು ಹಾಕಿದರು. ನಂತರ ವಾದ್ಯಗಳೊಂದಿಗೆ ಜೆಸಿಬಿ ಯಂತ್ರದ ಮೇಲೆ ಕಳೇಬರವನ್ನಿಟ್ಟು ಅಂತಿಮಯಾತ್ರೆ ನಡೆಸಿದ್ದಾರೆ. ಸಂಪ್ರದಾಯದ ಪ್ರಕಾರ, ಗ್ರಾಮದ ಹೊರಗೆ ತೋಡಿದ್ದ ಗುಂಡಿಯಲ್ಲಿ ಹೂಳುವ ಮೂಲಕ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಇದನ್ನೂ ಓದಿ: ಭಾರತೀಯ ಸಂಪ್ರದಾಯದಂತೆ ಹಸೆಮಣೆ ಏರಿದ ಮೂವರು ರಷ್ಯಾ ಜೋಡಿಗಳು