ಲಖನೌ: ಉತ್ತರಪ್ರದೇಶದಲ್ಲಿ ಇಂದಿನಿಂದ ಆರಂಭವಾದ ಬಜೆಟ್ ಅಧಿವೇಶನದ ಮೊದಲ ದಿನವೇ ಗದ್ದಲಕ್ಕೆ ಸಾಕ್ಷಿಯಾಯಿತು. ಜಂಟಿ ಸದನವನ್ನುದ್ದೇಶಿಸಿ ರಾಜ್ಯಪಾಲರ ಭಾಷಣ ಆರಂಭಕ್ಕೂ ಮೊದಲೇ ಸಮಾಜವಾದಿ ಪಕ್ಷ ಸದನದ ಬಾವಿಗಿಳಿದು ಪ್ರತಿಭಟನೆ ಆರಂಭಿಸಿತು. ಕಾನೂನು ಸುವ್ಯವಸ್ಥೆ, ಹಣದುಬ್ಬರ, ನಿರುದ್ಯೋಗ ಸೇರಿದಂತೆ ಹಲವಾರು ವಿಷಯಗಳ ಮೇಲೆ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿತು.
ಬಜೆಟ್ ಅಧಿವೇಶನ ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಯಿತು. ರಾಜ್ಯಪಾಲರ ಭಾಷಣ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಸದನದ ಬಾವಿಗಿಳಿದ ಪ್ರಮುಖ ಪ್ರತಿಪಕ್ಷ ಸಮಾಜವಾದಿ ಪಾರ್ಟಿಯ ಶಾಸಕರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಪಾಲ್ ಸಿಂಗ್ ಯಾದವ್ ನೇತೃತ್ವದಲ್ಲಿ ವಿಧಾನಸಭೆಯಲ್ಲಿನ ಚೌಧರಿ ಚರಣ್ ಸಿಂಗ್ ಪ್ರತಿಮೆ ಬಳಿ ಸರ್ಕಾರದ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಣದುಬ್ಬರ ಹೆಚ್ಚಾಗಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ಸರ್ಕಾರ ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಗದ್ದಲ ಎಬ್ಬಿಸಿದರು.
ಈ ಮಧ್ಯೆಯೂ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಅವರು ಸರ್ಕಾರದ ಸಾಧನೆಗಳ ಬಗ್ಗೆ ಭಾಷಣ ಮಾಡಿದರು. ಆಡಳಿತ ಪಕ್ಷದ ಶಾಸಕರು ಮೇಜುಕುಟ್ಟಿ ಸರ್ಕಾರಕ್ಕೆ ಬೆಂಬಲ ನೀಡಿದರು. ರಾಜ್ಯಪಾಲರ ಭಾಷಣ ಮುಗಿಯುವವರೆಗೂ ಎಸ್ಪಿ ಶಾಸಕರು ಘೋಷಣೆ ಕೂಗುತ್ತಾ ಇದ್ದರು. ಬಜೆಟ್ ಅಧಿವೇಶನಕ್ಕೂ ಮುನ್ನಾದಿನ ಕರೆದ ಸರ್ವಪಕ್ಷ ಸಭೆಯಲ್ಲಿ ಕಾನೂನು ಸುವ್ಯವಸ್ಥೆ, ಹಣದುಬ್ಬರ, ನಿರುದ್ಯೋಗ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲು ಅವಕಾಶ ಮಾಡಿಕೊಡಲಾಗುವುದು ಎಂದು ಸರ್ಕಾರ ತಿಳಿಸಿತ್ತು. ವಿಪಕ್ಷಗಳು ಕೂಡ ಇದರ ಬಗ್ಗೆ ವಿಸ್ತೃತ ಚರ್ಚೆಗೆ ಹಕ್ಕು ಮಂಡಿಸಿದ್ದರು.
ಸಿಎಂ ಯೋಗಿ ಆದಿತ್ಯನಾಥ್ ಬಜೆಟ್ ಮಂಡನೆ: ಫೆಬ್ರವರಿ 22ರಂದು ಸರ್ಕಾರ ಬಜೆಟ್ ಮಂಡಿಸಲಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಜೆಟ್ ಪ್ರತಿ ಓದಲಿದ್ದಾರೆ. ಸರ್ಕಾರ ಸುಮಾರು 7.5 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಲಿದೆ ಎಂದು ಹೇಳಲಾಗಿದೆ. ರಾಜ್ಯವನ್ನು ವೇಗವಾಗಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಗುರಿಯನ್ನು ಸರ್ಕಾರ ಹೊಂದಿದೆ.
ಸರ್ವಪಕ್ಷ ಸಭೆ: ಬಜೆಟ್ ಅಧಿವೇಶನದ ಆರಂಭಕ್ಕೂ ಮೊದಲು ಅಂದರೆ ಭಾನುವಾರದಂದು ಸರ್ವಪಕ್ಷ ಸಭೆ ಹಾಗೂ ಕಲಾಪ ಸಲಹಾ ಸಮಿತಿ ಸಭೆ ನಡೆಸಲಾಯಿತು. ವಿಧಾನಸಭೆ ಸ್ಪೀಕರ್ ಸತೀಶ್ ಮಹಾನ್ ಅವರು ಸದನದ ಅಜೆಂಡಾದ ಬಗ್ಗೆ ಚರ್ಚೆ ನಡೆಸಿದರು. ಸದನವನ್ನು ಗರಿಷ್ಠ ಸಮಯದವರೆಗೆ ಸುಗಮವಾಗಿ ಮತ್ತು ವ್ಯವಸ್ಥಿತವಾಗಿ ನಡೆಸುವಂತೆ ಸರ್ವಪಕ್ಷ ಸಭೆಯಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಕಾನೂನು ಸುವ್ಯವಸ್ಥೆ, ನಿರುದ್ಯೋಗ ಮತ್ತು ಹಣದುಬ್ಬರ ವಿಷಯ ಪ್ರಸ್ತಾಪಿಸಿ ವಿರೋಧ ಪಕ್ಷದ ಸದಸ್ಯರು ಮಾತನಾಡಿದರು. ಇದಲ್ಲದೇ ರಾಮಚರಿತಮಾನಸ ವಿವಾದಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆ ನಡೆಸಲು ಕೋರಿದವು. ಅಲ್ಲದೇ, ಎಲ್ಲ ಪಕ್ಷದ ಮುಖಂಡರು ಸುಗಮ ಸದನ ನಡೆಸಲು ಸಹಕರಿಸುವುದಾಗಿ ವಿಧಾನಸಭಾಧ್ಯಕ್ಷರಿಗೆ ಭರವಸೆ ನೀಡಿದರು.
ಸಮಾಜವಾದಿ ಪಕ್ಷದ ಮುಖ್ಯ ಸಚೇತಕ ಮನೋಜ್ ಪಾಂಡೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಆರಾಧನಾ ಮಿಶ್ರ ಮೋನಾ, ಬಿಎಸ್‌ಪಿ ಶಾಸಕಾಂಗ ಪಕ್ಷದ ನಾಯಕ ಉಮಾಶಂಕರ್ ಸಿಂಗ್ ಸೇರಿವ ಹಲವರು ಪಾಲ್ಗೊಂಡಿದ್ದರು.
ಓದಿ: ಯುವ ಪ್ರತಿನಿಧಿಗಳಿಗೆ ಆದ್ಯತೆ: ಕಾಂಗ್ರೆಸ್ ಪದಾಧಿಕಾರಿಗಳ ಸ್ಥಾನಕ್ಕೆ 50ರ ಮಿತಿ; ಕೆಸಿ ವೇಣುಗೋಪಾಲ್