ನವದೆಹಲಿ: ಪ್ರಸಕ್ತ ಸಾಲಿನಲ್ಲಿ 45,03,097 ಕೋಟಿ ರೂ. ವೆಚ್ಚದ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಕಳೆದ 2022-23ರ ಬಜೆಟ್ ಗಾತ್ರ 41,87,232 ಕೋಟಿ ರೂ. ಇತ್ತು. ಪ್ರಸ್ತುತ 2023-24ರ ಬಜೆಟ್ ಗಾತ್ರವು 45,03,097 ಕೋಟಿ ರೂ.ಗೆ ಏರಿಕೆಯಾಗಿದೆ. ಪ್ರಸಕ್ತ ಸಾಲಿನ ಬಜೆಟ್ 3,15,865 ಕೋಟಿ ರೂ.ನಷ್ಟು ಹೆಚ್ಚಳವಾಗಿದೆ.
2022-23ರ ವರ್ಷದ ಪ್ರಕಾರ, ರಾಜ್ಯಗಳ ವಿತ್ತೀಯ ಕೊರತೆಯು (ಜಿಎಸ್ಡಿಪಿ) ಶೇ 3.5ರಷ್ಟು ಇದೆ. ಅದರಲ್ಲಿ 0.5 ಪ್ರತಿಶತವನ್ನು ವಿದ್ಯುತ್ ವಲಯದ ಸುಧಾರಣೆಗಳಿಗೆ ವಿನಿಯೋಗಿಸಲಾಗುತ್ತದೆ. ಸಾಲಗಳನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಯ 24.3 ಲಕ್ಷ ಕೋಟಿ ರೂ ವೆಚ್ಚ ಮಾಡಲಾಗುತ್ತದೆ. ಇದರಲ್ಲಿ ನಿವ್ವಳ ತೆರಿಗೆ ಸ್ವೀಕೃತಿಗಳು 20.9 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ಬಂಡವಾಳ ವೆಚ್ಚ ಸುಮಾರು 7.3 ಲಕ್ಷ ಕೋಟಿ ರೂ. ಆಗಿದೆ. ವಿತ್ತೀಯ ಕೊರತೆಯನ್ನು ಪರಿಷ್ಕೃತ ಅಂದಾಜು ಜಿಡಿಪಿಯ ಶೇ 6.4ರ ಗುರಿ ಇಟ್ಟುಕೊಳ್ಳಲಾಗಿದೆ.
2023-24ರ ವರ್ಷವನ್ನು ಪರಿಗಣಿಸಿದರೆ, ಸಾಲಗಳನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಗಳು ಮತ್ತು ಒಟ್ಟು ವೆಚ್ಚಗಳು ಕ್ರಮವಾಗಿ 27.2 ಲಕ್ಷ ಕೋಟಿ ರೂ. ಹಾಗೂ 45 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ನಿವ್ವಳ ತೆರಿಗೆ ಸ್ವೀಕೃತಿಗಳು ₹23.3 ಲಕ್ಷ ಕೋಟಿ ಎಂದು ಲೆಕ್ಕಾಚಾರ ಮಾಡಲಾಗಿದೆ.
ವಿತ್ತೀಯ ಕೊರತೆ: ವಿತ್ತೀಯ ಕೊರತೆಯು ಜಿಡಿಪಿಯ ಶೇಕಡಾ 5.9 ಎಂದು ಅಂದಾಜಿಸಲಾಗಿದೆ. 2021-22 ರ ಬಜೆಟ್ ಭಾಷಣದಲ್ಲಿ, ವಿತ್ತೀಯ ಬಲವರ್ಧನೆಯ ಹಾದಿಯನ್ನು ಮುಂದುವರಿಸಲು ನಾವು ಯೋಜಿಸುತ್ತಿದ್ದೇವೆ ಎಂದು ಹಣಕಾಸು ಸಚಿವರು ಘೋಷಿಸಿದ್ದರು. 2025-26ರ ವೇಳೆಗೆ ವಿತ್ತೀಯ ಕೊರತೆಯನ್ನು ಶೇ 4.5ಕ್ಕಿಂತ ಕಡಿಮೆ ಅವಧಿಯಲ್ಲಿ ತಲುಪುತ್ತದೆ. ನಾವು ಈ ಮಾರ್ಗವನ್ನು ಅನುಸರಿಸಿದ್ದೇವೆ ಮತ್ತು 2025-26ರ ವೇಳೆಗೆ ವಿತ್ತೀಯ ಕೊರತೆ ಜಿಡಿಪಿಯ ಶೇಕಡಾ 4.5ಕ್ಕಿಂತ ಕೆಳಗೆ ತರುವ ಉದ್ದೇಶವಿದೆ ಎಂದಿದ್ದರು.
2023-24ರಲ್ಲಿ ವಿತ್ತೀಯ ಕೊರತೆಗೆ ಹಣಕಾಸು ಒದಗಿಸಲು, ದಿನಾಂಕದ ಸೆಕ್ಯೂರಿಟಿಗಳಿಂದ ನಿವ್ವಳ ಮಾರುಕಟ್ಟೆ ಸಾಲವನ್ನು 11.8 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಬಾಕಿ ಹಣಕಾಸು ಸಣ್ಣ ಉಳಿತಾಯ ಮತ್ತು ಇತರ ಮೂಲಗಳಿಂದ ಬರುವ ನಿರೀಕ್ಷೆಯಿದೆ. ಒಟ್ಟು ಮಾರುಕಟ್ಟೆ ಸಾಲವನ್ನು 15.4 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.
ಹೆಚ್ಚಾದ ವಿವಿಧ ವೆಚ್ಚಗಳು: ಬಡ್ಡಿ ಪಾವತಿ ಮತ್ತು ಸಾಲದ ಸೇವೆ ವೆಚ್ಚದಲ್ಲಿ ಏರಿಕೆ ಕಂಡಿದ್ದು, 1,39,320 ಕೋಟಿ ರೂ. ಹೆಚ್ಚಳವಾಗಿದೆ. ಕೇಂದ್ರ ಸರ್ಕಾರದಿಂದ ಸಾಲಗಳ ಮೇಲಿನ ಬಡ್ಡಿ ಪಾವತಿಗೆ ಹೆಚ್ಚಿನ ಹಣ ಒದಗಿಸಲಾಗಿದೆ.
ರಾಜ್ಯ ಸರ್ಕಾರಗಳಿಗೆ ಅನುದಾನ ಮತ್ತು ಸಾಲಗಳ ವೆಚ್ಚದಲ್ಲಿ 1,01,828 ಕೋಟಿ ರೂ. ಏರಿಕೆಯಾಗಿದೆ. GST ಪರಿಹಾರ ನಿಧಿಗೆ ವರ್ಗಾವಣೆಗಳಿಗೆ ಹೆಚ್ಚಿನ ನಿಬಂಧನೆ ಮತ್ತು ಬಂಡವಾಳ ವೆಚ್ಚಕ್ಕಾಗಿ ಸಾಲವಾಗಿ ವಿಶೇಷ ನೆರವು ನೀಡಲಾಗಿದೆ. ರೈಲ್ವೇ ಬಂಡವಾಳದ ವೆಚ್ಚ ವೆಚ್ಚದಲ್ಲಿ 80,900 ಕೋಟಿ ರೂ. ಏರಿಕೆ ಕಂಡಿದೆ. ಹೊಸ ಮಾರ್ಗಗಳ ನಿರ್ಮಾಣ, ದ್ವಿಗುಣಗೊಳಿಸುವಿಕೆ, ರೋಲಿಂಗ್ ಸ್ಟಾಕ್ ಮತ್ತು ರೈಲ್ವೇ ಪಿಎಸ್‌ಯುಗಳಲ್ಲಿ ಹೂಡಿಕೆಗೆ ಹೆಚ್ಚಿನ ಅವಕಾಶಗಳನ್ನು ನೀಡಲಾಗಿದೆ.
ತೈಲ ಮಾರುಕಟ್ಟೆ ಕಂಪನಿಗಳಲ್ಲಿ ಹೂಡಿಕೆಗೆ ಆದ್ಯತೆ: ಪೆಟ್ರೋಲಿಯಂ ಮೇಲಿನ ಬಂಡವಾಳ ವೆಚ್ಚದಲ್ಲಿ 35,468 ಕೋಟಿ ರೂ. ಹೆಚ್ಚಳವಾಗಿದೆ. ತೈಲ ಮಾರುಕಟ್ಟೆ ಕಂಪನಿಗಳಲ್ಲಿ ಹೂಡಿಕೆಗೆ ಆದ್ಯತೆ ನೀಡಲಾಗಿದೆ. ರಕ್ಷಣಾ ಸೇವೆಗಳ ವೆಚ್ಚದಲ್ಲಿ 23,220 ಕೋಟಿ ರೂ. ಏರಿಕೆಯಾಗಿದೆ. ಇದರಿಂದ ಸೈನ್ಯ, ನೌಕಾಪಡೆಯ ಆದಾಯ ವೆಚ್ಚ ಮತ್ತು ಸೇನೆ ಮತ್ತು ವಾಯುಪಡೆಯ ಬಂಡವಾಳ ವೆಚ್ಚಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ.
ಜಲ ಜೀವನ್ ಮಿಷನ್: ನೀರು ಸರಬರಾಜು ಮತ್ತು ನೈರ್ಮಲ್ಯ ವೆಚ್ಚದಲ್ಲಿ 13,539 ಕೋಟಿ ರೂ. ಏರಿಕೆ ಕಂಡಿದೆ. ಜಲ ಜೀವನ್ ಮಿಷನ್, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಮಿಷನ್ ಕಡೆಗೆ ಹೆಚ್ಚಿನ ಹಂಚಿಕೆ ಮಾಡಿಲಾಗಿದೆ. ಪೋಲೀಸ್ ವೆಚ್ಚದಲ್ಲೂ 6,999 ಕೋಟಿ ರೂ. ಹೆಚ್ಚಳ ಮಾಡಲಾಗಿದೆ. ಬಾರ್ಡರ್ ಸೆಕ್ಯುರಿಟಿ ಫೋರ್ಸ್, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಮತ್ತು ಪೋಲೀಸ್, ಕೇಂದ್ರ ಸಶಸ್ತ್ರ ಪಡೆಗಳ ಬಂಡವಾಳ ವೆಚ್ಚಗಳಿಗೆ ಹೆಚ್ಚಿನ ಗಮನ ಕೊಡಲಾಗಿದೆ.
ಗ್ರಾಮ, ಸಣ್ಣ ಕೈಗಾರಿಕೆಗಳು ವೆಚ್ಚ ಹೆಚ್ಚಳ: ಗ್ರಾಮ ಮತ್ತು ಸಣ್ಣ ಕೈಗಾರಿಕೆಗಳು ವೆಚ್ಚದಲ್ಲಿ 6,268 ಕೋಟಿ ರೂ. ಹೆಚ್ಚಳವಾಗಿದೆ. ಅರ್ಹ ಎಂಎಸ್ಎಂಐ ಸಾಲಗಾರರಿಗೆ ಗ್ಯಾರಂಟಿ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಸೌಲಭ್ಯಕ್ಕಾಗಿ ಹೆಚ್ಚಿನ ಹಂಚಿಕೆ ಮಾಡಲಾಗಿದೆ. ಇತರೆ ವೈಜ್ಞಾನಿಕ ಸಂಶೋಧನೆ ವೆಚ್ಚದಲ್ಲಿ 3,232 ಕೋಟಿ ರೂ. ಏರಿಕೆಯಾಗಿದ್ದು, ಮುಖ್ಯವಾಗಿ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ. ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ವೆಚ್ಚದಲ್ಲಿ 3,229 ಕೋಟಿ ರೂ. ಹೆಚ್ಚಳವಾಗಿದ್ದು, ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಒತ್ತು ನೀಡಲಾಗಿದೆ. ನೀರಾವರಿ ವೆಚ್ಚದಲ್ಲಿ 2,400 ಕೋಟಿ ರೂ. ಏರಿಕೆ ಕಂಡಿದ್ದು, ಕೆನ್-ಬೆಟ್ವಾ ನದಿ ಯೋಜನೆಗೆ ಪರಸ್ಪರ ಸಂಪರ್ಕ ಕಲ್ಪಿಸಲು ಹೆಚ್ಚಿನ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಕೇಂದ್ರ ಬಜೆಟ್ 2023: 7 ಲಕ್ಷದ ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ