ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಗಾದಿಯ ಜಿದ್ದಾಜಿದ್ದಿಗೆ ಸಮಯ ಹತ್ತಿರವಾಗುತ್ತಿದ್ದಂತೆ, ಬಹುಜನ ಸಮಾಜವಾದಿ ಪಕ್ಷ ತನ್ನ ಚಿತ್ತವನ್ನು ಬ್ರಾಹ್ಮಣರ ಮತಗಳತ್ತ ಹರಿಸಿದೆ. ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸಾಂಪ್ರದಾಯಿಕ ಮತದಾರರಾದ ಬ್ರಾಹ್ಮಣರ ಮತಗಳನ್ನು ಕಬಳಿಸಲು ಬಿಎಸ್ಪಿ ಪಕ್ಷ ವಿವಿಧ ತಂತ್ರಗಳನ್ನು ಹೆಣೆದಿದೆ.
ಅಯೋಧ್ಯೆಯಲ್ಲಿ ಬಿಎಸ್ಪಿ ಸಂಸದ ಸತೀಶ್ ಚಂದ್ರ ಮಿಶ್ರಾರ 'ಜೈ ಶ್ರೀ ರಾಮ್' ಕೂಗು ಇಡೀ ಸಭೆಯನ್ನು ತುಂಬಿತ್ತು. ಬಿಎಸ್ಪಿ ಸಂಸದ ಸತೀಶ್ ಚಂದ್ರ ಮಿಶ್ರಾ ರಾಮ ಜನ್ಮಭೂಮಿ ಮತ್ತು ಹನುಮಾನ ಘರಿ ದೇವಾಲಯಗಳಿಗೆ ಭೇಟಿ ನೀಡಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿದರು. ಇದೇ ಮೊದಲ ಬಾರಿಗೆ ಬಿಎಸ್ಪಿಯ ಮುಖಂಡರು ತಮ್ಮ ಹಿಂದೂ ಒಲವನ್ನು ಪಕ್ಷದ ವೇದಿಕೆಯಲ್ಲಿ ತೋರಿಸುತ್ತಿರುವುದು ಅಚ್ಚರಿಯ ವಿಚಾರವಾಗಿದೆ.
ರಾಜ್ಯದಲ್ಲಿ ಬ್ರಾಹ್ಮಣರು ಹೆಚ್ಚಾಗಿರುವ ಅಯೋಧ್ಯೆಯಿಂದ ತಮ್ಮ ಚುನಾವಣಾ ಪ್ರಚಾರ ಶುರು ಮಾಡುವುದಾಗಿ ಈ ಹಿಂದೆ ಬಹುಜನ ಸಮಾಜವಾದಿ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಹೇಳಿಕೊಂಡಿದ್ದರು.
ಇದನ್ನೂ ಓದಿ: ಬ್ರಾಹ್ಮಣರಿಗೆ ಮಾಯಾವತಿ ಬಲೆ: ಬಿಜೆಪಿಯ ಸಾಂಪ್ರದಾಯಿಕ 'ಮತಬುಟ್ಟಿ'ಗೆ ಹಾಕಿಕೊಳ್ಳಲು ಕಸರತ್ತು
ಪಕ್ಷದ ಈ ನಡೆಗೆ ಅಸಮಾಧಾನಗೊಂಡಿರುವ ಅಲ್ಪಸಂಖ್ಯಾತ ಸಮುದಾಯದ ಬಿಎಸ್ಪಿ ಶಾಸಕ ಅಸ್ಲಂ ರೈನಿ, "ಈ ರೀತಿಯ ಹಿಂದೂ ಕಾರ್ಡ್ ಆಡಲು ಬೆಹೆಂಜಿ (ಮಾಯಾವತಿ) ಯನ್ನು ಯಾರು ಮನವರಿಕೆ ಮಾಡಿದ್ದಾರೆಂದು ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
"ಬಿಎಸ್ಪಿ ತನ್ನ ವಿನಾಶದತ್ತ ಸಾಗುತ್ತಿದೆ. ದಶಕಗಳ ನಂತರ ದಲಿತರನ್ನು ಮೆಚ್ಚಿಸಿದ ನಂತರ, ಪಕ್ಷವು ಇದ್ದಕ್ಕಿದ್ದಂತೆ ಬಿಜೆಪಿಯ ಅಂಗಸಂಸ್ಥೆಯಾಗಿದೆ."
ಬಿಎಸ್ಪಿ ಈಗಾಗಲೇ ತನ್ನ ಪ್ರಮುಖ ಒಬಿಸಿ ನಾಯಕರನ್ನು ಕಳೆದುಕೊಂಡಿದೆ. ಹಿರಿಯ ನಾಯಕರಾದ ಲಾಲ್ಜಿ ವರ್ಮಾ ಮತ್ತು ರಾಮ್ ಅಚಲ್ ರಾಜ್ಭರ್ ಅವರ ಉಚ್ಛಾಟನೆ ಇಬ್ಬರೂ ತಮ್ಮ ಸಮುದಾಯಗಳ ಮೇಲೆ ಸಾಕಷ್ಟು ಪ್ರಭಾವ ಬೀರಿರುವುದು ಒಬಿಸಿಗಳಲ್ಲಿ ಪಕ್ಷದ ನೆಲೆಯನ್ನು ಕುಗ್ಗಿಸಿದೆ.
ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಬ್ರಾಹ್ಮಣ ಸಮುದಾಯವನ್ನು ಬದಿಗೊತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬೆನ್ನಲ್ಲೇ ತಮ್ಮ ಪಕ್ಷಕ್ಕೆ ಮತ ನೀಡುವಂತೆ ಮಾಯಾವತಿ ಬ್ರಾಹ್ಮಣರಿಗೆ ಮನವಿ ಮಾಡಿದ್ದಾರೆ.
ಸಾಂಪ್ರದಾಯಿಕವಾಗಿ ದಲಿತ ಮತಬ್ಯಾಂಕ್‌ನಲ್ಲಿ ಪ್ರಾಬಲ್ಯ ಹೊಂದಿದ್ದ ಮಾಯಾವತಿ 2007 ರಲ್ಲಿ ಅಧಿಕಾರಕ್ಕೆ ಬಂದದ್ದು ಒಂದು ಅನನ್ಯ ಸಂಯೋಜನೆಯ ಹಿನ್ನೆಲೆಯಲ್ಲಿ - ಶೇಕಡಾ 21 ರಷ್ಟು ದಲಿತ ಮತಗಳು ಮತ್ತು ಶೇಕಡಾ 11 ರಷ್ಟು ಬ್ರಾಹ್ಮಣ ಮತಗಳು ಇವರಿಗೆ ಬಿದ್ದಿದ್ದವು. 2007ರ ರಾಜ್ಯ ಚುನಾವಣೆಯಲ್ಲಿ ಮಾಯಾವತಿ ಬ್ರಾಹ್ಮಣ ಸಮುದಾಯದ 85 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು.