ಶ್ರೀನಗರ: ತನ್ನ ಮದುವೆಗೆ ತೆರಳಲು ಯೋಧನಿಗೆ ವಿಶೇಷ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿ ಬಿಎಸ್‌ಎಫ್ ಆದೇಶಿಸಿದೆ. ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ರಿಮೋಟ್ ಪೋಸ್ಟ್‌ನಲ್ಲಿ ನಿಯೋಜಿಸಲಾಗಿದ್ದ ಯೋಧ ಒಡಿಶಾದಲ್ಲಿರುವ ತಮ್ಮ ಮನೆಗೆ ತಲುಪಲು ಗಡಿ ಭದ್ರತಾ ಪಡೆ (BSF) ವಿಶೇಷ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದೆ. ಕಾರ್ಯಾಚರಣೆಯನ್ನು ರಕ್ಷಣಾ ಕಾರ್ಯಾಚರಣೆಗಾಗಿ ನಡೆಸಲಾಗಿಲ್ಲ. ಬದಲಾಗಿ ಬಿಎಸ್‌ಎಫ್ ಯೋಧನನ್ನು ಅವರ ಮದುವೆ ಸಮಯಕ್ಕೆ ಅವರ ಮನೆಗೆ ತಲುಪಿಸಲು ಮಾಡಿದ ಕೆಲಸವಾಗಿದೆ.
ಗಡಿ ನಿಯಂತ್ರಣ ರೇಖೆಯ ಮಚಿಲ್ ಸೆಕ್ಟರ್‌ನ ಎತ್ತರದ ಪೋಸ್ಟ್‌ನಲ್ಲಿ ನಿಯೋಜಿಸಲಾದ ಯೋಧ ನಾರಾಯಣ ಬೆಹೆರಾ(30) ಅವರ ವಿವಾಹವು ಮೇ 2 ರಂದು ನಡೆಯಲಿದೆ. ಆದರೆ, ಎಲ್‌ಒಸಿ ಹಿಮದಿಂದ ಆವೃತವಾಗಿರುವುದರಿಂದ ರಸ್ತೆ ಸಂಪರ್ಕ ದುಸ್ತರವಾಗಿತ್ತು. ಅಲ್ಲದೇ, ಕಾಶ್ಮೀರ ಕಣಿವೆಯೊಂದಿಗಿನ ಅದರ ರಸ್ತೆ ಸಂಪರ್ಕ ಸದ್ಯ ಕಡಿತಗೊಂಡಿದೆ. ಹೀಗಾಗಿ ಯೋಧ ಸುಮಾರು 2,500 ಕಿ.ಮೀ ದೂರದಲ್ಲಿರುವ ತನ್ನ ಮನೆಯನ್ನು ತಲುಪುವುದು ಅಸಾಧ್ಯವಾಗಿತ್ತು.
ಇದಕ್ಕೆ ಲಭ್ಯವಿರುವ ಏಕೈಕ ಸಾರಿಗೆ ಮಾರ್ಗವೆಂದರೆ ಏರ್‌ಲಿಫ್ಟ್. ಈ ವಿಷಯವನ್ನು ಬಿಎಸ್‌ಎಫ್ ಇನ್ಸ್‌ಪೆಕ್ಟರ್ ಜನರಲ್ (ಕಾಶ್ಮೀರ ಗಡಿಭಾಗ) ರಾಜಾ ಬಾಬು ಸಿಂಗ್ ಅವರಿಗೆ ತಿಳಿಸಲಾಯಿತು. ರಾಜಾ ಬಾಬು ಸಿಂಗ್ ಅವರ ಸೂಚನೆಯ ಮೇರೆಗೆ ತಕ್ಷಣ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ ಎಂದು ಹಿರಿಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯೋಧನ ಪೋಷಕರು ಇತ್ತೀಚೆಗೆ ಅವರ ಘಟಕದ ಕಮಾಂಡರ್‌ಗಳನ್ನು ಸಂಪರ್ಕಿಸಿದರು, ತಮ್ಮ ಮಗನ ಮದುವೆಗೆ ಬರಲು ಸಾಧ್ಯವಾಗದ ಆತಂಕವನ್ನು ವ್ಯಕ್ತಪಡಿಸಿದರು. ಹೇಳಿದ ದಿನಾಂಕಕ್ಕೆ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದರಿಂದ ಅವರು ಸಂತಸಗೊಂಡಿದ್ದಾರೆ. ಹೆಲಿಕಾಪ್ಟರ್ ಗುರುವಾರ ಮುಂಜಾನೆ ಬೆಹೆರಾ ಅವರನ್ನು ಶ್ರೀನಗರಕ್ಕೆ ಕರೆ ತಂದಿತು. ಇದೀಗ ಅವರು ಒಡಿಶಾದ ಧೆಂಕನಲ್ ಜಿಲ್ಲೆಯ ಆದಿಪುರ ಗ್ರಾಮದ ತಮ್ಮ ಮನೆಗೆ ತೆರಳುತ್ತಿದ್ದಾರೆ. 'ಸೈನಿಕರ ಕಲ್ಯಾಣವು ನಮ್ಮ ಮೊದಲ ಆದ್ಯತೆ' ಎಂದು ಅಧಿಕಾರಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಸೇನಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿ ಕನ್ನಡಿಗ ಬಗ್ಗವಳ್ಳಿ ಸೋಮಶೇಖರ್ ರಾಜು ನೇಮಕ: ಸಿಎಂ, ಹೆಚ್ಡಿಕೆ ಅಭಿನಂದನೆ