ನವದೆಹಲಿ: ದೆಹಲಿ ಮದ್ಯ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಬಿಆರ್‌ಎಸ್ ಪಕ್ಷದ ಎಂಎಲ್‌ಸಿ ಕೆ.ಕವಿತಾ ಅವರಿಂದು ಜಾರಿ ನಿರ್ದೇಶನಾಲಯದ (ಇಡಿ) ಕಚೇರಿಗೆ ಆಗಮಿಸಿ ವಿಚಾರಣೆಗೆ ಹಾಜರಾಗಿದ್ದಾರೆ. ಇಡಿ ವಿಚಾರಣೆಗೆ ಕವಿತಾ ಎರಡನೇ ಬಾರಿಗೆ ಹಾಜರಾಗಿದ್ದಾರೆ. ಪತಿ ಅನಿಲ್, ವಕೀಲ ಭರತ್ ಮತ್ತು ಸಚಿವ ಶ್ರೀನಿವಾಸ್ ಗೌಡ್ ಜೊತೆಗಿದ್ದರು.
ಇಡಿ ಅಧಿಕಾರಿಗಳು ಕವಿತಾರನ್ನು ಪಿಎಂಎಲ್‌ಎ ಸೆಕ್ಷನ್ 50ರ ಅಡಿಯಲ್ಲಿ ಪ್ರಶ್ನಿಸುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪ ಇವರ ಮೇಲಿದೆ. ಈ ತಿಂಗಳ 16ರಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಅವರ ಪ್ರತಿನಿಧಿಯಾಗಿ ವಕೀಲ ಭರತ್ ಅವರನ್ನು ಮಾತ್ರ ಕಳುಹಿಸಿದ್ದರು. ತಾವು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇದೇ 24ರಂದು ವಿಚಾರಣೆ ನಡೆಸಲಿದೆ ಎಂದು ಪತ್ರ ರವಾನಿಸಿದ್ದರು. ಆದರೆ, ಇಡಿ ಕವಿತಾಗೆ 20ರಂದೇ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಹಾಜರಾಗಿದ್ದಾರೆ.
ಕವಿತಾ ವಿರುದ್ಧ ಆರೋಪವೇನು?: ಮದ್ಯ ನೀತಿ ಹಗರಣದ ಸಮಯದಲ್ಲಿ ಕವಿತಾ ಅನೇಕ ಮೊಬೈಲ್ ಫೋನ್ ಕರೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ, ಕವಿತಾ ಬೇನಾಮಿ ಹೊಂದಿದ್ದಾರೆ ಎಂಬ ಆರೋಪದಡಿ, ಇದೇ ಪ್ರಕರಣ ಸಂಬಂಧ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರನ್ ಪಿಳ್ಳೈ ಎಂಬುವರನ್ನು ಈಗಾಗಲೇ ಬಂಧಿಸಲಾಗಿದೆ. ಈ ಹಗರಣಕ್ಕೆ ಸಂಬಂಧಿಸಿದ ವಹಿವಾಟುಗಳ ಬಗ್ಗೆ ಕವಿತಾರನ್ನು ತನಿಖಾ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
ಮಾ.24 ರಂದು ನಡೆಯಲಿದೆ ವಿಚಾರಣೆ: ಮಾರ್ಚ್ 11ರಂದು ಒಂಬತ್ತು ಗಂಟೆಗಳ ಕಾಲ ಕವಿತಾ ಇಡಿ ವಿಚಾರಣೆ ಎದುರಿಸಿದ್ದರು. ಮತ್ತೊಂದೆಡೆ, ಇವರ ಪರ ವಕೀಲರು ಇಡಿ ಸಮನ್ಸ್‌ನಿಂದ ಮುಕ್ತಿ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮಾ.15ರಂದು ಸಲ್ಲಿಸಿರುವ ಅರ್ಜಿಯನ್ನು ಆಲಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಮಹಿಳೆಯನ್ನು ಜಾರಿ ನಿರ್ದೇಶನಾಲಯದ ಕಚೇರಿಗೆ ಕರೆಯಬಹುದೇ?. ಇದು ಸಂಪೂರ್ಣವಾಗಿ ನೆಲದ ಕಾನೂನಿಗೆ ವಿರುದ್ಧವಾಗಿದೆ. ಕವಿತಾ ಈಗಾಗಲೇ ಇಡಿ ಮುಂದೆ ಹಾಜರಾಗಿದ್ದಾರೆ. ಆದರೆ, ಮತ್ತೊಮ್ಮೆ ವಿಚಾರಣೆಗೆ ಕರೆಯುತ್ತಿದ್ದಾರೆ ಎಂದು ವಕೀಲರು ನ್ಯಾಯಪೀಠದ ಗಮನಕ್ಕೆ ತಂದಿದ್ದರು. ಮಾರ್ಚ್ 24ರಂದು ಈ ಅರ್ಜಿ ವಿಚಾರಣೆ ನಡೆಯಲಿದೆ.
ಮದ್ಯ ನೀತಿ ಹಗರಣದಲ್ಲಿ ಸಿಸೋಡಿಯಾ ಬಂಧನ: ದೆಹಲಿ ಮದ್ಯ ನೀತಿ ಹಗರಣದಲ್ಲಿ ಕ್ರಿಮಿನಲ್ ಪಿತೂರಿ, ಭ್ರಷ್ಟಾಚಾರ ಮತ್ತು ಸಾಕ್ಷ್ಯ ನಾಶ ಆರೋಪದ ಮೇಲೆ ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಇದೇ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಮನೀಶ್ ಸಿಸೋಡಿಯಾ ಅವರನ್ನು ಇಡಿ ಅಧಿಕಾರಿಗಳು ಕೂಡಾ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ, ಸಿಸೋಡಿಯಾ ಬೇರೆ ಹೆಸರಲ್ಲಿನ ಸಿಮ್ ಕಾರ್ಡ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ಖರೀದಿಸಿದ್ದಾರೆ. ಇದುವರೆಗೆ ಅವರು ನೀಡಿರುವ ಉತ್ತರಗಳು ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ಇತರ ಆರೋಪಿಗಳು ನೀಡಿದ ಹೇಳಿಕೆಗಳಿಗೆ ವಿರುದ್ಧವಾಗಿವೆ ಎಂದು ಇಡಿ ಹೇಳಿದೆ.
ಇದನ್ನೂ ಓದಿ: ರಾಹುಲ್ ಹೇಳಿಕೆ, ಅದಾನಿ ತನಿಖೆ ಗದ್ದಲ: ಸಂಸತ್ ಸಮಯ ವ್ಯರ್ಥ, ಕಲಾಪ ಮುಂದೂಡಿಕೆ