ಸ್ತನ ಕ್ಯಾನ್ಸರ್, ಇದು ಪ್ರಪಂಚದಾದ್ಯಂತ ಮಹಿಳೆಯರಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ವಿಧದ ಕ್ಯಾನ್ಸರ್ ಆಗಿದೆ. ಬೇರೆ ಕ್ಯಾನ್ಸರ್ನಂತೆ ಇದು ಕೂಡ ಮಾರಕವಾಗಿದ್ದು, ಇದಕ್ಕೆ ಶಸ್ತ್ರಚಿಕಿತ್ಸೆಯ ಹೊರತಾಗಿ ಬೇರೆ ಯಾವುದೇ ಚಿಕಿತ್ಸೆ ಲಭ್ಯವಿಲ್ಲ ಎಂದು ಜನರು ಭಾವಿಸುತ್ತಾರೆ. ಆದರೆ, ಆರಂಭಿಕ ಹಂತದಲ್ಲಿಯೇ ಸ್ತನ ಕ್ಯಾನ್ಸರ್ ಅನ್ನು ಪತ್ತೆಹಚ್ಚಿದರೆ, ಅನೇಕ ಔಷಧಿಗಳ ಮೂಲಕ ಇದಕ್ಕೆ ಚಿಕಿತ್ಸೆ ಕೊಡಿಸಬಹುದಾಗಿದೆ.
ಸ್ತನ ಕ್ಯಾನ್ಸರ್ ಗಂಭೀರವಾದ ಕಾಯಿಲೆಯಾಗಿದೆ. ಹೀಗಾಗಿಯೇ ಸ್ತ್ರೀರೋಗ ತಜ್ಞರು ಮಹಿಳೆಯರಿಗೆ ಸ್ತನದಲ್ಲಿ ಗಡ್ಡೆ ಅಥವಾ ಏನಾದರೂ ಅಸಾಮಾನ್ಯವಾದದನ್ನು ಗಮನಿಸಿದರೆ ತಕ್ಷಣ ತಪಾಸಣೆ ಮಾಡಿಸಿಕೊಳ್ಳಲು ಸಲಹೆ ನೀಡುತ್ತಾರೆ. ಏಕೆಂದರೆ, ಸರಿಯಾದ ಸಮಯದಲ್ಲಿ ಇದನ್ನು ಪತ್ತೆ ಹಚ್ಚಿದರೆ, ಸರಿಯಾದ ಚಿಕಿತ್ಸೆ ಸಾಧ್ಯವಿದೆ. ಭಾರತೀಯ ಕ್ಯಾನ್ಸರ್ ಸೊಸೈಟಿಯ ಪ್ರಕಾರ (ಐಸಿಎಸ್), ಪ್ರತಿ 28 ಮಹಿಳೆಯರಲ್ಲಿ ಒಬ್ಬರು ಸ್ತನ ಕ್ಯಾನ್ಸರ್ನಿಂದ ಬಳಲುತ್ತಾರೆ.
ಅಕ್ಟೋಬರ್ - ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳು
ಹಿಂದೆಲ್ಲಾ ಸ್ತನ ಕ್ಯಾನ್ಸರ್ ಬಗ್ಗೆ ಮಹಿಳೆಯರು ಜಾಗರೂಕರಾಗಿರಲಿಲ್ಲ, ಆದರೆ ಪ್ರಪಂಚದಾದ್ಯಂತ ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಸಿದ ಜನಜಾಗೃತಿ ಅಭಿಯಾನದ ಸಹಾಯದಿಂದ ಮಹಿಳೆಯರು ಇದರ ಬಗ್ಗೆ ಹೆಚ್ಚು ಜಾಗೃತರಾದರು. ಆದರೂ ಕೂಡ ಗ್ರಾಮೀಣ ಭಾಗದ ಮಹಿಳೆಯರು ಇದರ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿಲ್ಲ.
ಹೀಗಾಗಿ ಇದರ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವ ಉದ್ದೇಶದಿಂದ, ಸಕಾಲಿಕ ಚಿಕಿತ್ಸೆಯನ್ನು ಒದಗಿಸುವ ದೃಷ್ಟಿಯಿಂದ ಪ್ರತಿ ವರ್ಷ ಅಕ್ಟೋಬರ್ ತಿಂಗಳನ್ನು ಮಹಿಳೆಯರಿಗಾಗಿ ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳಾಗಿ ನಡೆಸಲಾಗುತ್ತದೆ. 2021ರ ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳ ಘೋಷವಾಕ್ಯ 'RISE: Rally In Supporting, Serving and Screening Everyone' ಆಗಿದೆ.
ಸ್ತನ ಕ್ಯಾನ್ಸರ್ ಎಂದರೇನು?
ಭಾರತೀಯ ಕ್ಯಾನ್ಸರ್ ಸೊಸೈಟಿ ಹೇಳುವ ಪ್ರಕಾರ, ಕೆಲವು ಸ್ತನ ಕೋಶಗಳು ಅಸಹಜವಾಗಿ ಬೆಳೆಯಲು ಆರಂಭಿಸಿದಾಗ ಸ್ತನ ಕ್ಯಾನ್ಸರ್ ಸಂಭವಿಸುತ್ತದೆ. ಈ ಜೀವಕೋಶಗಳು ಆರೋಗ್ಯಕರ ಕೋಶಗಳಿಗಿಂತ ಹೆಚ್ಚು ವೇಗವಾಗಿ ವಿಭಜನೆಗೊಳ್ಳುತ್ತವೆ ಮತ್ತು ಇವುಗಳ ಸಂಗ್ರಹ ಮುಂದುವರಿಯುತ್ತದೆ. ಕ್ರಮೇಣ ಒಂದು ಗಡ್ಡೆ ಅಥವಾ ದ್ರವ್ಯರಾಶಿಯ ರೂಪ ಪಡೆದುಕೊಳ್ಳುತ್ತವೆ. ಈ ಕೋಶಗಳು ದೇಹದ ಇತರ ಭಾಗಗಳಿಗೆ ಹರಡುವ ಸಾಧ್ಯತೆಯೂ ಇದೆ. ಸ್ತನ ಕ್ಯಾನ್ಸರ್ ಹೆಚ್ಚಾಗಿ ಹಾಲು ಉತ್ಪಾದಿಸುವ ನಾಳಗಳಲ್ಲಿ ಅಥವಾ ಸ್ತನದೊಳಗೆ ಉಂಟಾಗುತ್ತದೆ. ಪುರುಷರು ಕೂಡ ಸ್ತನವನ್ನು ಹೊಂದಿರುವುದರಿಂದ ಕೆಲವೊಮ್ಮೆ ಅವರಿಗೂ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಶೇ.28ರಷ್ಟು ಮಂದಿಗೆ ಸ್ತನ ಕ್ಯಾನ್ಸರ್!
ಸ್ತನ ಕ್ಯಾನ್ಸರ್‌ನಲ್ಲಿ 4 ಹಂತಗಳಿವೆ. ಮೊದಲ ಹಂತದಲ್ಲಿ ಶೇ.80ರಷ್ಟು ಚೇತರಿಕೆಯ ಸಾಧ್ಯತೆಗಳು ಇರುತ್ತವೆ. ಎರಡನೇ ಹಂತದಲ್ಲಿ ಚೇತರಿಕೆ ಸಾಧ್ಯತೆ ಶೇ.60-70 ವರೆಗೆ ಇರುತ್ತದೆ. ಮೂರನೇ ಮತ್ತು ನಾಲ್ಕನೇ ಹಂತದಲ್ಲಿ ಚೇತರಿಕೆ ಪ್ರಮಾಣ ಬಹಳ ಕಡಿಮೆ ಇದ್ದು, ಚಿಕಿತ್ಸೆ ಅನಿವಾರ್ಯವಾಗಿರುತ್ತದೆ.
ರೋಗಲಕ್ಷಣಗಳು
- ಸ್ತನ ಅಥವಾ ಅಂಡರ್ ಆರ್ಮ್ನಲ್ಲಿ ಗಡ್ಡೆ (ಸಾಮಾನ್ಯ ಲಕ್ಷಣ)
- ತಲೆಕೆಳಗಾದ ಸ್ತನದ ತೊಟ್ಟು
- ಸ್ತನದ ಗಾತ್ರ, ಆಕಾರದಲ್ಲಿ ಬದಲಾವಣೆ
- ಸ್ತನದ ತೊಟ್ಟು ಅಥವಾ ಸ್ತನದ ಸುತ್ತಲಿನ ಚರ್ಮದ ಸಿಪ್ಪೆ ಸುಲಿಯುವುದು
- ಸ್ತನದ ಚರ್ಮದ ಕೆಂಪು ಅಥವಾ ಕಿತ್ತಳೆ ಬಣ್ಣಕ್ಕೆ ತಿರುಗುವುದು
- ಸ್ತನದ ತೊಟ್ಟುಗಳಿಂದ ರಕ್ತಸಿಕ್ತ ಅಥವಾ ಸ್ಪಷ್ಟವಾದ ಯಾವುದೇ ಅಂಶದ ವಿಸರ್ಜನೆ
- ಎದೆಯ ಮೇಲೆ ಊತ ಮತ್ತು ಉಷ್ಣತೆ
- ಸ್ತನದ ತೊಟ್ಟುಗಳ ಮೇಲೆ ತುರಿಕೆ, ಹುಣ್ಣು ಅಥವಾ ದದ್ದು
ಅಪಾಯಕಾರಿ ಅಂಶಗಳು
ಸ್ತನ ಕ್ಯಾನ್ಸರ್‌ಗೆ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ. ಆದಾಗ್ಯೂ, ಹಾರ್ಮೋನುಗಳ ಬದಲಾವಣೆಗಳು, ಜೀವನಶೈಲಿ ಮತ್ತು ಇತರ ಪರಿಸರ ಅಂಶಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಲು ಕಾರಣವೆಂದು ಅಧ್ಯಯನಗಳು ತೋರಿಸಿವೆ. ಭಾರತೀಯ ಕ್ಯಾನ್ಸರ್ ಸೊಸೈಟಿಯಿಂದ ಪಟ್ಟಿ ಮಾಡಲಾದ ಅಪಾಯಕಾರಿ ಅಂಶಗಳು ಇಲ್ಲಿವೆ..
- ವಯಸ್ಸಾದಂತೆ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಳ
- ಈ ಹಿಂದಿನ ಸ್ತನಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬರಬಹುದು
- ಅನುವಂಶಿಕ ಜೀನ್ಗಳು - ಕುಟುಂಬದವರಿಗೆ ಸ್ತನ ಕ್ಯಾನ್ಸರ್ ಇದ್ದರೆ ಅನುವಂಶೀಯವಾಗಿ ಬರುವ ಸಾಧ್ಯತೆ
- ಬೊಜ್ಜು ಮತ್ತು ದಟ್ಟವಾದ ಸ್ತನಗಳು
- ಆರಂಭಿಕ ಅಥವಾ ತಡವಾದ ಮುಟ್ಟು
- ಹಿರಿಯ ವಯಸ್ಸಿನಲ್ಲಿ ಮೊದಲ ಮಗುವನ್ನು ಹೊಂದುವುದು
- ಎಂದಿಗೂ ಗರ್ಭವತಿ ಆಗದೇ ಇರುವುದು
- ಮುಟ್ಟು ನಿಂತ ಬಳಿಕ ಹಾರ್ಮೋನ್ ಥೆರಪಿಗೆ ಒಳಗಾಗುವುದು
- ಅತಿಯಾದ ಮದ್ಯಪಾನ, ಧೂಮಪಾನ ಮತ್ತು ತಂಬಾಕು ಸೇವನೆ
- ದೈಹಿಕವಾಗಿ ನಿಷ್ಕ್ರಿಯವಾಗಿರುವುದು
- ಮೌಖಿಕ ಗರ್ಭನಿರೋಧಕಗಳ ದೀರ್ಘಕಾಲೀನ ಬಳಕೆ
ಸ್ತನ ಕ್ಯಾನ್ಸರ್ ಅಪಾಯವನ್ನು ಶೇ.30ರಷ್ಟಾದರೂ ಕಡಿಮೆ ಮಾಡುವ ಮಾರ್ಗಗಳು
- ಉತ್ತಮ ಆರೋಗ್ಯ ಶೈಲಿ ಬೆಳೆಸಿಕೊಳ್ಳುವುದು
- ದೀರ್ಘಕಾಲ ಮಗುವಿಗೆ ಎದೆ ಹಾಲು ಕುಡಿಸುವುದು
- ಪ್ರನಿನಿತ್ಯ ದೈಹಿಕ ಚಟುವಟಿಕೆಗಳು
- ತೂಕ ನಿಯಂತ್ರಣ
- ಮಿತವಾಗಿ ಮದ್ಯ ಸೇವಿಸುವುದು ಅಥವಾ ಸೇವಿಸದೇ ಇರುವುದು
- ತಂಬಾಕು ಸೇವನೆ ನಿಯಂತ್ರಣ