ಹೈದರಾಬಾದ್: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಸಾಧನೆಗೈಯಲು ವಯಸ್ಸು ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿದ್ದಾನೆ ಆಂಧ್ರಪ್ರದೇಶ ಮೂಲದ ಈ ಬಾಲಕ.
ಕಿರಿ ವಯಸ್ಸಿನ ಮಕ್ಕಳು ಆಟಗಳ ಮೂಲಕ ಆನಂದಿಸುತ್ತಿರುವಾಗ, ಈ ಬಾಲಕ ಬೇರೆ ಮಾರ್ಗವನ್ನು ಕಂಡುಕೊಂಡು ರಷ್ಯಾದ ಎಲ್ಬ್ರಸ್ ಪರ್ವತವನ್ನು ಏರುವಲ್ಲಿ ಯಶಸ್ವಿಯಾಗಿದ್ದಾನೆ. ಮೂರನೇ ತರಗತಿ ಓದುತ್ತಿರುವ ಭುವನ್ ಆಫ್ರಿಕಾದ ಕಿಲಿಮಂಜಾರೊ ಪರ್ವತವನ್ನು ಹತ್ತಿದ ಹುಡುಗಿಯೋರ್ವಳಿಂದ ಸ್ಫೂರ್ತಿ ಪಡೆದು ಈ ಸಾಧನೆಗೈದಿದ್ದಾನೆಂದು ಎಂದು ವರದಿಯಾಗಿದೆ.
ವಿದ್ಯಾರ್ಥಿ ಭುವನ್ ತನ್ನ ಹೆತ್ತವರಿಗೆ ಪರ್ವತವನ್ನು ಏರುವ ಬಯಕೆಯನ್ನು ವ್ಯಕ್ತಪಡಿಸಿದ್ದು, ಪೋಷಕರು ಆತನಿಗೆ ಪ್ರೋತ್ಸಾಹಿಸಿದ್ದಾನೆ. ಭುವನ್ ಅವರ ತಂದೆ ಐಎಎಸ್ ಅಧಿಕಾರಿ ಗಂಧಂ ಚಂದ್ರುಡು ಪುತ್ರನಿಗೆ ತರಬೇತಿ ಕೊಡಿಸಲು ನಿರ್ಧರಿಸಿದರು. ಮೂರನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ, ಕ್ಲೈಂಬಿಂಗ್‌ನಲ್ಲಿ ವಿವಿಧ ಸ್ಥಳಗಳಲ್ಲಿ ತರಬೇತಿ ಪಡೆದನು. ಐದು ತಿಂಗಳ ತೀವ್ರ ತರಬೇತಿಯ ನಂತರ, ತನ್ನ ತಂಡದೊಂದಿಗೆ ಸೆಪ್ಟೆಂಬರ್ 11 ರಂದು ರಷ್ಯಾಕ್ಕೆ ತೆರಳಿದ.
ತಂಡವು ಸೆಪ್ಟೆಂಬರ್ 12 ರಂದು ಟೆರ್ಸ್‌ಕೋಲ್‌ನ ಮೌಂಟ್ ಎಲ್ಬ್ರಸ್ ಬೇಸ್‌ಗೆ ಹೋಯಿತು. ಸೆಪ್ಟೆಂಬರ್ 13 ರಂದು ಅವರು 3,500 ಮೀಟರ್ ಎತ್ತರ ಶಿಖರವೇರಿ ಬೇಸ್ ಕ್ಯಾಂಪ್‌ಗೆ ಮರಳಿದರು. ಅಲ್ಲಿ ಕೆಲವು ತರಬೇತಿಯ ನಂತರ ಸೆಪ್ಟೆಂಬರ್ 18 ರಂದು 5,642 ಮೀಟರ್ ಎತ್ತರದ ಎಲ್ಬ್ರಸ್ ಪರ್ವತದ ತುದಿಯನ್ನು ತಲುಪಿ ದಾಖಲೆ ನಿರ್ಮಿಸಿದ್ದಾನೆ.