ಲುಧಿಯಾನ (ಪಂಜಾಬ್): ಕೊರೊನಾದಿಂದ ಆರ್ಥಿಕ ಸಂಕಷ್ಟ ಎದುರಾದ ಹಿನ್ನೆಲೆ, ಕುಟುಂಬವನ್ನು ಪೋಷಿಸಲು ವಂಶ ಎಂಬ ಈ ಬಾಲಕ ಸಾಕ್ಸ್ ಮಾರಾಟ ಮಾಡಲು ಪ್ರಾರಂಭಿಸಿದ. ಬಡತನದ ಬೇಗೆಯಲ್ಲಿ ಬಳಲುತ್ತಿದ್ದರೂ ಸಂಪೂರ್ಣ ಪ್ರಾಮಾಣಿಕತೆಯಿಂದ ಸಾಕ್ಸ್ ಮಾರುತ್ತಾನೆ. ಯಾರಾದರೂ ಈತನಿಗೆ ಹೆಚ್ಚುವರಿ ಹಣವನ್ನು ತೆಗೆದುಕೊಳ್ಳಲು ಈತ ನಿರಾಕರಿಸುತ್ತಾನೆ.
ಮೂವರು ಸಹೋದರಿಯರು, ಓರ್ವ ಸಹೋದರ ಮತ್ತು ಪೋಷಕರು ಸೇರಿದಂತೆ ಏಳು ಸದಸ್ಯರ ಕುಟುಂಬದಲ್ಲಿ ವಂಶ ಕಿರಿಯ ಪುತ್ರ. ಕಳೆದ ಹಲವಾರು ವರ್ಷಗಳಿಂದ ವಂಶ ಕುಟುಂಬವು ಹಣಕಾಸಿನ ತೊಂದರೆ ಎದುರಿಸುತ್ತಿದೆ. ತಂದೆ ಆಟೋ ರಿಕ್ಷಾ ಓಡಿಸುವ ಮೂಲಕ ಜೀವನ ಸಾಗಿಸುತ್ತಿದ್ದರು. ಆದರೆ, ಅನಾರೋಗ್ಯದ ಕಾರಣ, ತಂದೆ ಸಾಕ್ಸ್ ಮಾರಾಟ ಮಾಡಲು ಪ್ರಾರಂಭಿಸಿದರು. ಆದರೆ, ಕೊರೊನಾ ಸಾಂಕ್ರಾಮಿಕ ರೋಗದ ಬಳಿಕ ಸಾಕ್ಸ್ ವ್ಯಾಪಾರವೂ ಕುಗ್ಗಿತು.
ವಂಶ್ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಮುಗ್ಧತೆ ಮತ್ತು ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂತರ ಈ ಬಾಲಕ ಮತ್ತು ಆತನ ಕುಟುಂಬದೊಂದಿಗೆ ಜಿಲ್ಲಾಧಿಕಾರಿ ಮೂಲಕ ಸಂಪರ್ಕ ಸಾಧಿಸಿದರು. ಅವರು ವಿಡಿಯೋ ಕಾಲ್ ಮೂಲಕವೂ ಮಾತನಾಡಿದ್ದಾರೆ. ಮುಖ್ಯಮಂತ್ರಿ ಅವರು ಈ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿಗಳ ಆರ್ಥಿಕ ಸಹಾಯ ನೀಡಿದರು. ವಂಶ್ ಅವರ ಶಿಕ್ಷಣದ ವೆಚ್ಚವನ್ನು ಸಹ ಭರಿಸುವುದಾಗಿ ಘೋಷಿಸಿದ್ದಾರೆ.
ಮುಖ್ಯಮಂತ್ರಿ ತಕ್ಷಣ ವಂಶ ಅವರನ್ನು 5 ನೇ ತರಗತಿಗೆ ದಾಖಲಿಸುವಂತೆ ಲುಧಿಯಾನ ಡಿಸಿ ಗೆ ನಿರ್ದೇಶನ ನೀಡಿದ್ದಾರೆ. ಕುಟುಂಬಕ್ಕೆ 2 ಲಕ್ಷ ರೂ.ಗಳ ಚೆಕ್ ಸಹ ನೀಡಿದ್ದಾರೆ.
ಈಟಿವಿ ಭಾರತ ತಂಡದೊಂದಿಗೆ ಮಾತನಾಡಿದ ವಂಶ, ಈಗ ಸಾಕ್ಸ್ ಮಾರಾಟ ಮಾಡುವ ಕೆಲಸವನ್ನು ಮಾಡುವುದಿಲ್ಲ. ಶಾಲೆಗೆ ಹೋಗಿ ಅಧ್ಯಯನ ಮಾಡುತ್ತೇನೆ ಎಂದು ಹೇಳಿದ್ದಾನೆ. ನಮಗೆ ಸಹಾಯ ಮಾಡಿದ್ದಕ್ಕಾಗಿ ಎಲ್ಲರಿಗೂ ತುಂಬಾ ಧನ್ಯವಾದಗಳು. ನಮ್ಮ ಮಕ್ಕಳಿಗೆ ದೊಡ್ಡ ಸಹಾಯ ಮಾಡಿದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೆ ಧನ್ಯವಾದಗಳು ಎಂದು ವಂಶ್ನ ಕುಟುಂಬ ಹೇಳಿದೆ.