ನವದೆಹಲಿ: ಪೂರ್ವ ಲಡಾಖನ್ 26 ಪಹರೆಗಳು ಭಾರತದಿಂದ ಕೈತಪ್ಪಿದೆ ಎಂಬ ಆತಂಕದ ವರದಿ ಮತ್ತು ಗಡಿಯಲ್ಲಿ ಈ ಪ್ರದೇಶಗಳಿಗಾಗಿ ಭಾರತ ಮತ್ತು ಚೀನಾದ ಘರ್ಷಣೆ ಹೆಚ್ಚಾಗಿದೆ. ಉದ್ವಿಗ್ನತೆಯ ಮಧ್ಯೆ ಸದಾ ಕಾಲ ಗಡಿ ತಂಟೆ ನಡೆಯುವ ಸಿಕ್ಕೀಂ ಮತ್ತು ಅರುಣಾಚಲ ಪ್ರದೇಶದಲ್ಲಿ ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ ಎಂದು ಸೇನೆ ತಿಳಿಸಿದೆ.
ಲಡಾಖ್ ಪ್ರದೇಶಗಳಲ್ಲಿ ಚೀನೀ ಸೈನ್ಯ ಅಧಿಪತ್ಯ ಸಾಧಿಸಲು ಮುಂದಾಗಿದೆ. ಚೀನಾ ಬಲವಾಗಿ ತಗಾದೆ ತೆಗೆಯುವ ಅರುಣಾಚಲಪ್ರದೇಶದಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಪರಿಸ್ಥಿತಿ ಸ್ಥಿರವಾಗಿದೆ. ಈಸ್ಟರ್ನ್ ಕಮಾಂಡ್ ಪಡೆ ಅರುಣಾಚಲ ಪ್ರದೇಶ ಮತ್ತು ಸಿಕ್ಕೀಂ ವಲಯದ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಪಹರೆ ನಡೆಸುತ್ತಿದೆ ಎಂದು ಪ್ರಧಾನ ಕಮಾಂಡಿಂಗ್ ಇನ್ ಚೀಫ್ ಆರ್‌ಪಿ ಕಲಿತಾ ಹೇಳಿದರು.
ಗಡಿಯಾಚೆ ನಡೆಯುವ ಚಟುವಟಿಕೆಗಳನ್ನು ಭಾರತ ನಿರಂತರವಾಗಿ ಗಮನಿಸುತ್ತಿದೆ. ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ಗಡಿಗಳಲ್ಲಿ ಸಮಗ್ರತೆಯನ್ನು ಕಾಪಾಡಲು ಸೇನೆ ಸಮರ್ಥವಾಗಿದೆ. ಸೇನಾಪಡೆಗಳು ಅತ್ಯಂತ ವೃತ್ತಿಪರತೆ ಮತ್ತು ಸಮರ್ಪಣೆಯೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಗಡಿಯಾಚೆ ನಡೆಯುವ ಆಗುಹೋಗುಗಳ ಮೇಲೆ ನಿರಂತರವಾಗಿ ನಿಗಾ ವಹಿಸಲಾಗಿದೆ. ವಿರೋಧ ಎದುರಾದಲ್ಲಿ ಸೇನೆ ಸವಾಲೊಡ್ಡಲಿದೆ ಎಂದು ಹೇಳಿದರು.
ಲಡಾಖ್ನಲ್ಲಿ ಚೀನಾ ಸೇನೆ ತಗಾದೆ ತೆಗೆಯುವ ಮುನ್ನ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಎಲ್‌ಎಸಿಯನ್ನು ಉಲ್ಲಂಘಿಸುವ ಪ್ರಯತ್ನ ನಡೆಸಿತ್ತು. ಗಡಿ ದಾಟಿ ಬಂದ ಸೈನಿಕರನ್ನು ಭಾರತ ಸೇನೆ ಹಿಮ್ಮೆಟ್ಟಿಸಿತ್ತು. ಇದು ಹೊಡೆದಾಟಕ್ಕೂ ಕಾರಣವಾಗಿತ್ತು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಉತ್ತರಿಸಿಧ್ದರು. ಭಾರತೀಯ ಸೇನೆ ಸಮಯೋಚಿತ ನಡೆಯಿಂದಾಗಿ ಚೀನಿಗಳನ್ನು ಅಲ್ಲಿಂದ ಓಡಿಸಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಗಡಿಯಲ್ಲಿ ಚೀನಾ ಸೈನಿಕರ ಹೆಚ್ಚಳ: ಗಡಿ ಪ್ರದೇಶಗಳಲ್ಲಿ ಚೀನಾ ತನ್ನ ಸೈನ್ಯ ಬಲವನ್ನು ಹೆಚ್ಚಿಸುತ್ತಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾತನಾಡಿದ ಸೇನಾ ಕಮಾಂಡರ್, ಈ ಬಗ್ಗೆ ವರದಿಗಳು ಬಂದಿವೆ. ಆದರೂ, ಮುನ್ನೆಚ್ಚರಿಕಾ ಕ್ರಮವಾಗಿ ಗಡಿಯಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಚೀನಾ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡರೂ ಅದಕ್ಕೆ ತಕ್ಕ ಪ್ರತಿರೋಧ ಒಡ್ಡಲಾಗುವುದು ಎಂದು ತಿಳಿಸಿದರು.
ಲಡಾಖ್ನಲ್ಲಿ ಚೀನಾ ಸಂಘರ್ಷ: ಇನ್ನು, ಲಡಾಖ್ನಲ್ಲಿ ಚೀನಾ ಭಾರತದ ಕೆಲ ಪ್ರದೇಶಗಳ ಮೇಲೆ ಅಧಿಪತ್ಯ ಸಾಧಿಸಲು ಯತ್ನಿಸಿದೆ. 26 ಪಹರೆ ಕೇಂದ್ರಗಳ ಮೇಲೆ ಭಾರತ ಹಿಡಿತ ಕಳೆದುಕೊಂಡಿದೆ ಎಂಬ ಆತಂಕದ ವರದಿ ಬಂದಿದೆ. ಇದು ಉಭಯ ರಾಷ್ಟ್ರಗಳ ಮಧ್ಯೆ ಕಿತ್ತಾಟಕ್ಕೆ ಕಾರಣವಾಗಲಿದೆ ಎಂದು ಹೇಳಲಾಗಿದೆ. ಚೀನಾ ಪೂರ್ವ ಲಡಾಖ್ನಲ್ಲಿ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದು ಮುಂದಿನ ದಿನಗಳಲ್ಲಿ ಪಹರೆ ಕೇಂದ್ರಗಳ ಮೇಲೆ ಹಕ್ಕುಸ್ವಾಮ್ಯ ಸಾಧಿಸಲು ಮುಂದಾಗಲಿದೆ ಎಂಬ ಆತಂಕದ ವರದಿ ಬಂದಿದೆ.
ಪ್ರಧಾನಿ ಮೋದಿ ಸಭೆಯಲ್ಲಿ ವಿಷಯ ಪ್ರಸ್ತಾಪ: ಚೀನಾ ಸೇನೆ ಲಡಾಖ್ನಲ್ಲಿ ಭಾರತದ ಪ್ರದೇಶಗಳ ಮೇಲೆ ಹಿಡಿತ ಸಾಧಿಸುತ್ತಿರುವ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಐಪಿಎಸ್ ಅಧಿಕಾರಿಗಳ ಸಭೆಯಲ್ಲಿ ಪ್ರಸ್ತಾಪವಾಗಿದೆ. ಭಾರತ ಈ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಚೀನಾದೊಂದಿಗೆ ಗುದ್ದಾಟ ನಡೆಸಬೇಕಾದೀತು ಎಂದು ಅಧಿಕಾರಿಗಳು ಪ್ರಧಾನಿಗೆ ತಿಳಿಸಿದ್ದಾರೆ.
ಓದಿ: ಜೇಬಿನಲ್ಲಿ ಕೈ ಇಟ್ಟುಕೊಂಡ ರಕ್ಷಣಾ ಕಾರ್ಯದರ್ಶಿ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್