ಶ್ರೀನಗರ: ಇಲ್ಲಿನ ಸಾಂಬಾ ಗಡಿ ಭಾಗದಲ್ಲಿ 150 ಮೀಟರ್ ಉದ್ದದ ಸುರಂಗ ಮಾರ್ಗವನ್ನು ಬಿಎಸ್ಎಫ್ ಯೋಧರು ಭಾನುವಾರ ಪತ್ತೆ ಮಾಡಿದ್ದಾರೆ.
ಇತ್ತೀಚಿಗೆ ಜೈಶ್-ಎ-ಸಂಘಟನೆಗೆ ಸೇರಿದ್ದ ನಾಲ್ವರು ಯೋಧರನ್ನು ಸೇನೆ ಹೊಡೆದುರುಳಿಸಿತ್ತು. ಈ ಉಗ್ರರು ಇದೇ ಸುರಂಗ ಬಳಸಿ ಭಾರತದೊಳಗೆ ಪ್ರವೇಶಿಸಿದ್ದರು ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.
ಈ ಸುರಂಗವು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಗ್ರೋಟಾ ಬಳಿ ಇತ್ತೀಚಿಗೆ ನಡೆದ ಎನ್‌ಕೌಂಟರ್‌ನ ತನಿಖೆಯ ವೇಳೆ ಪತ್ತೆಯಾಗಿದೆ.
ಗುರುವಾರ ಹೆದ್ದಾರಿಯಲ್ಲಿರುವ ಬಾನ್ ಟೋಲ್ ಪ್ಲಾಜಾದಲ್ಲಿ ತಪಾಸಣೆಗಾಗಿ ಟ್ರಕ್ ಅನ್ನು ನಿಲ್ಲಿಸಿದಾಗ ನಾಲ್ವರು ಪಾಕಿಸ್ತಾನಿ ಭಯೋತ್ಪಾದಕರು ಗುಂಡಿನ ಚಕಮಕಿಯಲ್ಲಿ ಹತರಾಗಿದ್ದರು. ಈ ಉಗ್ರರು ಸುರಂಗ ಬಳಸಿ ಭಾರತಕ್ಕೆ ಬಂದಿದ್ದರು ಎನ್ನಲಾಗ್ತಿದೆ.
ಪಾಕಿಸ್ತಾನದ ಶಾಕಾರ್‌ಗಡದಲ್ಲಿರುವ ಜೈಶ್ ಕ್ಯಾಂಪ್‌ನಿಂದ ನದಿಯ ಮೂಲಕ ಸಾಂಬಾ ಗಡಿಯವರೆಗೆ 30ಕಿ.ಮೀ. ದೂರವನ್ನು ಉಗ್ರರು ಕಾಲ್ನಡಿಗೆಯಲ್ಲೇ ಕ್ರಮಿಸಿದ್ದರು ಎಂದು ತಿಳಿದುಬಂದಿದೆ.