ನಾಗ್ಪುರ (ಮಹಾರಾಷ್ಟ್ರ): ಮಹಾರಾಷ್ಟ್ರ ಕರ್ನಾಟಕ ಗಡಿ ವಿಚಾರ ಸೇರಿದಂತೆ ಇನ್ನೂ ಹಲವಾರು ವಿಚಾರಗಳನ್ನು ಮುಂದಿಟ್ಟುಕೊಂಡು ಮಹಾರಾಷ್ಟ್ರ ವಿಕಾಸ ಆಘಾಡಿ ನಾಗ್ಪುರ ವಿಧಾನಸೌಧದ ಎದುರು ಪ್ರತಿಭಟನೆ ಮುಂದುವರೆಸಿದೆ. ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರ ವಿಧಾನಮಂಡಲ ಚಳಿಗಾಲ ಅಧಿವೇಶನ ಇಲ್ಲಿ ನಡೆಯುತ್ತಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಎನ್ಸಿಪಿ ನಾಯಕ ಹಾಗೂ ಮಾಜಿ ಗೃಹ ಮಂತ್ರಿ ದಿಲೀಪ್ ವಾಲ್ಸೆ ಪಾಟೀಲ ಮಾತನಾಡಿ, ಗಡಿವಿವಾದ ಕುರಿತಾಗಿ ನಿನ್ನೆ ಕರ್ನಾಟಕ ಸರ್ಕಾರ ಗೊತ್ತುವಳಿ ಅಂಗೀಕರಿಸಿದೆ. ಕಳೆದ ಹಲವಾರು ವರ್ಷಗಳಿಂದಲೂ ಕರ್ನಾಟಕದಲ್ಲಿ ವಾಸಿಸುತ್ತಿರುವ ಮರಾಠಿ ಭಾಷಿಕರ ಪರವಾಗಿ ನಾವಿದ್ದೇವೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ನಲ್ಲೂ ಪ್ರಕರಣ ನಡೆಯುತ್ತಿದೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಹಾರಾಷ್ಟ್ರದ ಪರವಾಗಿ ಗೊತ್ತುವಳಿ ಅಂಗೀಕರಿಸುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಸದ್ಯದ ಸರ್ಕಾರದ ಬಳಿ ಈ ಗೊತ್ತುವಳಿ ಮಂಡಿಸಲು ಸಮಯವೇ ಇಲ್ಲವಾಗಿದೆ. ಗಡಿಭಾಗದ ಮರಾಠಿಗರ ಬಗ್ಗೆ ಮಹಾರಾಷ್ಟ್ರ ಸರ್ಕಾರ ಯಾವುದೇ ಕಾಳಜಿ ಹೊಂದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಬೇಕೆಂತಲೇ ಸರ್ಕಾರ ಈ ವಿಷಯವನ್ನು ಮುಂದೆ ಹಾಕುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕ ಸರ್ಕಾರ ಕ್ರಿಯಾಶೀಲವಾಗಿದ್ದರೆ, ಮಹಾರಾಷ್ಟ್ರ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ ಎಂಬರ್ಥದ ಘೋಷಣೆ ಬರೆದ ಭಿತ್ತಿಪತ್ರಗಳನ್ನು ಹಿಡಿದ ಪ್ರತಿಪಕ್ಷ ನಾಯಕರು ಹಾಗೂ ಅಪಾರ ಸಂಖ್ಯೆಯ ಶಾಸಕರು ಪ್ರತಿಭಟನೆ ಮುಂದುವರೆಸಿದ್ದಾರೆ. ಎನ್ಸಿಪಿ ನಾಯಕ ಅಜಿತ್ ಪವಾರ್ ಮತ್ತು ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ.
ಇದನ್ನೂ ಓದಿ: ಸದ್ಯಕ್ಕೆ ಮಾಸ್ಕ್ ಕಡ್ಡಾಯವಿಲ್ಲ: ಮಾಸ್ಕ್ ಧರಿಸಲು ಸಲಹೆ ನೀಡಿದ್ದು, ಪರಿಸ್ಥಿತಿ ನೋಡಿ ನಿರ್ಧಾರ ಎಂದ ಕೆ ಸುಧಾಕರ್