ನವದೆಹಲಿ/ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ರಾಷ್ಟ್ರ ರಾಜಧಾನಿಗೆ ಎರಡು ದಿನಗಳ ಭೇಟಿಯ ಹಮ್ಮಿಕೊಂಡಿದ್ದು, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೇರಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡುವುದರ ಜೊತೆಗೆ ವಿವಿಧ ಯೋಜನೆಗಳ ಕುರಿತು ರಾಜ್ಯದ ಸಂಸದರೊಂದಿಗೆ ಸಭೆ ನಡೆಸಲಿದ್ದಾರೆ.
ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ರಾಜೀಯಾಗುವ ಪ್ರಶ್ನೆ ಇಲ್ಲ: ನದಿ ಜೋಡಣೆ ವಿಚಾರದಲ್ಲಿ ಯಾವ ಕಾರಣಕ್ಕೂ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ರಾಜಿಯಾಗುವ ಪ್ರಶ್ನೆಯೇ ಇಲ್ಲ, ನಮ್ಮ ಪಾಲಿನ ನೀರಿನ ಹಂಚಿಕೆ ಕುರಿತು ಸ್ಪಷ್ಟವಾದ ನಿರ್ಧಾರ ಹೊರಬೀಳುವವರೆಗೂ ಡಿಪಿಆರ್ ಗೆ ರಾಜ್ಯ ಸಮ್ಮತಿ ನೀಡುವುದಿಲ್ಲ. ಈ ವಿಚಾರದಲ್ಲಿ ನಮ್ಮ ನಿಲುವು ಅಚಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನದಿ ಜೋಡಣೆ ಬಗ್ಗೆ ನಮ್ಮ ನಿಲುವು ಸ್ಪಷ್ಟವಿದೆ. ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗಲೂ ಸಹ ಕರ್ನಾಟಕದ ಸಮರ್ಪಕವಾದ ಪಾಲು, ನಮ್ಮ ನದಿ ಪಾತ್ರದಲ್ಲಿ ಉತ್ಪಾದನೆಯಾಗುವ ನೀರು, ಮತ್ತು ನಮ್ಮ ಜಲಾನಯನ ಪ್ರದೇಶದ ಬೇಡಿಕೆಗೆ ತಕ್ಕಂತೆ ನೀರಿನ ಹಂಚಿಕೆ ಇವು ಮೂರು ವಿಷಯ ಆಧಾರವಾಗಿರಿಸಿಕೊಂಡು ಡಿಪಿಆರ್ ಸಿದ್ಧಪಡಿಸಬೇಕು ಎಂದು ಹೇಳಿದ್ದೆ, ಈಗ ಡಿಪಿಆರ್ ಸಿದ್ಧಪಡಿಸುವ ಮುನ್ನ ಎಲ್ಲ ರಾಜ್ಯಗಳ ಸಂಪರ್ಕಿಸಿ ಮಾತುಕತೆ ನಡೆಸಬೇಕು ಎಂದಿದ್ದೇನೆ.
ಕರ್ನಾಟಕಕ್ಕೆ ನ್ಯಾಯ ಸಮ್ಮತವಾದ ನೀರಿನ ಪಾಲನ್ನು ಪಡೆದುಕೊಳ್ಳಲು ಎಲ್ಲ ರೀತಿಯ ಕ್ರಮವನ್ನು ಸರ್ಕಾರ ಕೈಗೊಳ್ಳಲಿದೆ. ಕೃಷ್ಣಾ ಮತ್ತು ಕಾವೇರಿ ಎರಡೂ ರಾಜ್ಯದ ಜೀವನದಿ ಹಾಗಾಗಿ ನದಿ ಜೋಡಣೆ ವಿಷಯವನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದರು.
ನಮ್ಮ ನಿಲುವು ನಾವು ಹೇಳಿದ್ದೇವೆ: ನಾವೇ ಮೊದಲು ನಮ್ಮ ನಿಲುವನ್ನು ಹೇಳಿದ್ದೇವೆ. ನಾವು ಈ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ನದಿ ಜೋಡಣೆ ವಿಚಾರದಲ್ಲಿ ನಮ್ಮ ನಿಲುವಿನ ಬಗ್ಗೆ ಸ್ಪಷ್ಟತೆ ಇದೆ, ಅದೇ ನಿಲುವನ್ನು ನಾವು ಗಟ್ಟಿಯಾಗಿ ಇರಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಸಂಸದರ ಸಭೆ ಬಳಿಕ ಹಣಕಾಸು ಸಚಿವರ ಭೇಟಿ: ಕೇಂದ್ರ ಬಜೆಟ್ ಗೂ ರಾಜ್ಯ ಬಜೆಟ್ ಗೂ ಸಾಮ್ಯತೆ ಇದೆ. ಸಾಕಷ್ಟು ಯೋಜನೆಗಳಿಗೆ ಎರಡೂ ಬಜೆಟ್ ನಲ್ಲಿ ಹಣಕಾಸು ಒದಗಿಸಿ ಕೊಡಬೇಕಾಗಲಿದೆ. ಹಾಗಾಗಿ ರಾಜ್ಯ ಬಜೆಟ್ ಗೂ ಮುನ್ನ ಇಂದು ಮಧ್ಯಾಹ್ನ ನಮ್ಮ ಸಂಸದರ ಜೊತೆ ಚರ್ಚೆ ನಡೆಸುತ್ತೇನೆ. ಇದಾದ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ ಭೇಟಿಯಾಗಲಿದ್ದೇನೆ.
ಇಂಧನ ಸಚಿವರ ಭೇಟಿಯನ್ನೂ ಮಾಡುತ್ತೇನೆ, ರಾಜನಾಥ್ ಸಿಂಗ್ ಉತ್ತರಪ್ರದೇಶಕ್ಕೆ ಹೋಗಿದ್ದಾರೆ ಬಂದ ನಂತರ ಸಂಜೆ ಅವರನ್ನೂ ಭೇಟಿಯಾಗುತ್ತೇನೆ. ಕೇಂದ್ರದ ಪ್ರಮುಖ ಮೂರು ಮಂತ್ರಿಗಳ ಭೇಟಿ ಉದ್ದೇಶವಿದೆ.
ನಾಳೆ ಕೂಡ ದೆಹಲಿಯಲ್ಲಿ ಇರುತ್ತೇನೆ ನಾಳೆಯೂ ಕೂಡ ಕೆಲ ಸಚಿವರನ್ನು ಭೇಟಿಯಾಗುತ್ತೇನೆ. ರಾಜ್ಯಕ್ಕೆ ಸಂಬಂಧಪಟ್ಟ ಯೋಜನೆಗಳ ಕುರಿತು ಮಾತುಕತೆ ನಡೆಸುತ್ತೇನೆ ಎಂದು ಮಾಹಿತಿ ನೀಡಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿಗೆ ಪ್ರಯತ್ನ ಮಾಡುತ್ತಿದ್ದೇನೆ.ಅವರು ಸಮಯಾವಕಾಶ ನೀಡಿದರೆ ಭೇಟಿಯಾಗುತ್ತೇನೆ. ಕೇಂದ್ರದ ನಾಯಕರು ಸಮಯ ಕೊಟ್ಟಾಗ ಸಚಿವ ಸಂಪುಟದ ಬಗ್ಗೆ ಚರ್ಚೆ ಮಾಡುತ್ತೇನೆ.
ಈಗಲೇ ಅದರ ಬಗ್ಗೆ ಹೇಳಲು ಸಾಧ್ಯವಿಲ್ಲ ಊಹಾಪೋಹಗಳ ಬಗ್ಗೆ ಮಾತನಾಡುವುದಿಲ್ಲ, ಸಂಪುಟ ರಚನೆ, ಪುನರ್ ರಚನೆ ಕುರಿತು ಸಾರ್ವಜನಿಕವಾಗಿ ಚರ್ಚೆ ಮಾಡಲ್ಲ ಎಂದು ಈಗಾಗಲೇ ಹೇಳಿದ್ದೇನೆ ವರಿಷ್ಠರು ಬಯಸಿದಾಗ ಆ ಕುರಿತು ಚರ್ಚೆ ನಡೆಯಲಿದೆ ಎಂದರು.
ಹಿಜಾಬ್ ಬಗ್ಗೆ ಪತಿಕ್ರಿಯೆ: ಶಾಲಾ-ಕಾಲೇಜುಗಳಲ್ಲಿ ಯಾವ ರೀತಿ ಉಡುಪು ಇರಬೇಕು ಎಂದು ನಮ್ಮ ಸಂವಿಧಾನ ಹಲವಾರು ವಿಚಾರಗಳಲ್ಲಿ ಹೇಳಿದೆ. ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮದಲ್ಲಿ ಈಗಾಗಲೇ ಸಮವಸ್ತ್ರ ವಿಷಯ ಸ್ಪಷ್ಟವಾಗಿದೆ.
ಸರ್ಕಾರ ಯಾವ ರೀತಿ ವ್ಯವಸ್ಥೆ ಮಾಡಬೇಕು, ಆಡಳಿತ ಮಂಡಳಿಗಳಿಗೆ ಏನು ಅಧಿಕಾರವಿದೆ ಎನ್ನುವುದು ಸೇರಿ ಎಲ್ಲವೂ ಕೂಡ ಅದರಲ್ಲಿ ಸ್ಪಷ್ಟವಾಗಿದೆ. ಈ ಸಂಬಂಧ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ.
ಕೇರಳ, ಮಹಾರಾಷ್ಟ್ರದಲ್ಲಿ ದೊಡ್ಡ ಚರ್ಚೆಯಾಗಿದೆ, ಎಲ್ಲಾ ರಾಜ್ಯದಲ್ಲಿ ಚರ್ಚೆಯಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿ ಇತ್ಯರ್ಥವಾಗಿದೆ, ಇಲ್ಲಿಯೂ ಕೂಡ ಹೈಕೋರ್ಟ್ ಮೆಟ್ಟಿಲೇರಿದೆ, ಸದ್ಯ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ ಹಾಗಾಗಿ ಇದರ ಬಗ್ಗೆ ಹೆಚ್ಚು ಏನು ಹೇಳುವುದಿಲ್ಲ ಎಂದರು.