ಮುಂಬೈ: ಡ್ರಗ್ಸ್ ಪ್ರಕರಣ ಸಂಬಂಧಿಸಿದಂತೆ ನಿನ್ನೆ ಸಂಜೆ ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಅವರ ಮುಂಬೈ ನಿವಾಸದ ಮೇಲೆ ದಾಳಿ ನಡೆಸಿದ್ದ ಮಾದಕ ವಸ್ತು ನಿಯಂತ್ರಣ ದಳ (ಎನ್ಸಿಬಿ) ಇಂದು ಅವರನ್ನು ಬಂಧಿಸಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿನ್ನೆಯಷ್ಟೇ ಡ್ರಗ್ ಪೆಡ್ಲರ್ ಅಜಯ್ ರಾಜು ಸಿಂಗ್ರನ್ನು ಬಂಧಿಸಿ ವಿಚಾರಣೆ ನಡೆಸಿದ್ದ ಎನ್ಸಿಬಿ, ಈತನ ಹೇಳಿಕೆ ಬೆನ್ನಲ್ಲೇ ಅರ್ಮಾನ್ ಕೊಹ್ಲಿ ನಿವಾಸದ ಮೇಲೆ ದಾಳಿ ನಡೆಸಿತ್ತು. ದಾಳಿ ವೇಳೆ ಅರ್ಮಾನ್ ಮನೆಯಿಂದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಅರ್ಮಾನ್ರನ್ನು ಮುಂಬೈನಲ್ಲಿನ ಎನ್ಸಿಬಿ ಕಚೇರಿಗೆ ಕರೆದೊಯ್ದು ವಿಚಾರಣೆಗೊಳಪಡಿಸಿದ್ದ ಅಧಿಕಾರಿಗಳು, ಇಂದು ಬೆಳಗ್ಗೆ ಅವರನ್ನು ಅರೆಸ್ಟ್ ಮಾಡಿದ್ದಾರೆ.
![Bollywood actor Armaan Kohli arrested in drugs case: NCB](https://etvbharatimages.akamaized.net/etvbharat/prod-images/12907788_122_12907788_1630210092045.png)
ಇದನ್ನೂ ಓದಿ: ಮತ್ತೋರ್ವ ಬಾಲಿವುಡ್ ನಟನ ಮನೆ ಮೇಲೆ NCB ದಾಳಿ
ಇದಕ್ಕೂ ಮುನ್ನ ಡ್ರಗ್ಸ್ ಪ್ರಕರಣ ಸಂಬಂಧ ಕಿರುತೆರೆ ನಟ ಗೌರವ್ ದೀಕ್ಷಿತ್ರನ್ನು ಎನ್ಸಿಬಿ ಶುಕ್ರವಾರ ಬಂಧಿಸಿತ್ತು. ನಟ ಸಲ್ಮಾನ್ ಖಾನ್ ನಟನೆಯ 'ಪ್ರೇಮ್ ರತನ್ ಧನ್ ಪಾಯೋ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅರ್ಮಾನ್ ಕೊಹ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ಹಿಂದಿಯ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-7 ನಲ್ಲಿ ಸ್ಪರ್ಧಿಯಾಗಿದ್ದರು.