ಛಪ್ರಾ (ಬಿಹಾರ): ಬಿಹಾರದ ಛಪ್ರಾದಲ್ಲಿ ದೋಣಿ ಮಗುಚಿ ನಾಲ್ವರು ಸಾವನ್ನಪ್ಪಿದ್ದು 15 ಜನ ಕಾಣೆಯಾಗಿರುವ ಘಟನೆ ನಡೆದಿದೆ. ಇಲ್ಲಿಯ ಸರಯೂ ನದಿಯಲ್ಲಿ 15ಕ್ಕೂ ಹೆಚ್ಚಿನ ಪ್ರಯಾಣಿಕರು ತುಂಬಿದ್ದ ದೋಣಿ ಪಲ್ಟಿಯಾಗಿದೆ. ಈ ಘಟನೆಯಲ್ಲಿ ಇದುವರೆಗೆ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಇನ್ನೂ 14 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಕೆಲವರು ಈಜಿ ದಡ ಸೇರಿದ್ದಾರೆ. ಮಾಂಝಿ ಪೊಲೀಸ್ ಠಾಣೆ ವ್ಯಾಪ್ತಿಯ ಮಥಿಯಾರ್ ಎಂಬಲ್ಲಿ ಈ ಘಟನೆ ನಡೆದಿದೆ. ನಾಪತ್ತೆಯಾಗಿರುವವರ ಪತ್ತೆಗಾಗಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಹೊಲದಲ್ಲಿ ಕೆಲಸ ಮುಗಿಸಿ ದೋಣಿಯಲ್ಲಿ ವಾಪಸಾಗುತ್ತಿದ್ದ ರೈತರು: ರೈತರು ಹಾಗೂ ಕೂಲಿ ಕಾರ್ಮಿಕರು ಹೊಲದಲ್ಲಿ ಕೆಲಸ ಮಾಡಲು ತೆರಳಿ ಸಂಜೆ ಸಮಯ ದೋಣಿಯಲ್ಲಿ ವಾಪಸ್ ಆಗುತ್ತಿದ್ದರು ಈ ವೇಳೆ ದುರ್ಘಟನೆ ಸಂಭವಿಸಿದೆ. ದೋಣಿ ಮಗುಚಿದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಪಡೆ ಮತ್ತು ಸಮೀಪದ ಗ್ರಾಮಗಳ ಜನರು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಘಟನಾ ಸ್ಥಳದಲ್ಲೇ ಎಸ್ಪಿ ಮೊಕ್ಕಾಂ ಹೂಡಿದ್ದಾರೆ.
ಮೃತರ ಗುರುತು ಪತ್ತೆ: ಘಟನೆಯಲ್ಲಿ ಮೃತಪಟ್ಟವರ ಗುರುತು ಪತ್ತೆಹಚ್ಚಲಾಗಿದೆ. ಫೂಲ್ ಕುಮಾರಿ ದೇವಿ, ತಾರಾ ದೇವಿ, ರಮಿತಾ ಕುಮಾರಿ, ಪಿಂಕಿ ಕುಮಾರಿ ಮೃತರು. ಕಾಣೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಗಂಗಾನದಿಯಲ್ಲಿ ಮುಳುಗಿದ ದೋಣಿ: ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಜನರನ್ನು ಹೊತ್ತು ಸಾಗುತ್ತಿದ್ದ ವೇಳೆ ಗಂಗಾನದಿಯಲ್ಲಿ ದೋಣಿ ಮಗುಚಿ ಬಿದ್ದು, ನಾಲ್ವರು ಸಾವನ್ನಪ್ಪಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಬಲಿಯಾ ನಗರದ ಮಾಲ್ದೇಪುರ ಎಂಬಲ್ಲಿ ಘಟನೆ ಸಂಭವಿಸಿತ್ತು. ಮುಂಡನ್ ಸಂಸ್ಕಾರದ ವೇಳೆ ಗಂಗಾ ನದಿಯಲ್ಲಿ ಒಂದು ತುದಿಯಿಂದ ಇನ್ನೊಂದು ತುದಿಗೆ ಜನರನ್ನು ಸಾಗಿಸುತ್ತಿದ್ದಾಗ ದೋಣಿ ಮಗುಚಿತ್ತು. ದೋಣಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಇದ್ದ ಕಾರಣ ಸಮತೋಲನ ಕಳೆದುಕೊಂಡ ದೋಣಿ ಮುಳುಗಿದೆ ಎಂದು ಹೇಳಲಾಗಿತ್ತು. ಚಿಕ್ಕ ದೋಣಿಯಲ್ಲಿ 40 ಮಂದಿ ಪ್ರಯಾಣಿಸುತ್ತಿದ್ದರು.
ಮುಜಾಫರ್ಪುರದಲ್ಲೂ ಇಂತಹದ್ದೇ ಘಟನೆ: ಮುಜಾಫರ್ಪುರ ಜಿಲ್ಲೆಯ ಬಾಗಮತಿ ನದಿಯಲ್ಲಿ 30ಕ್ಕೂ ಹೆಚ್ಚು ಮಕ್ಕಳನ್ನು ಹೊತ್ತು ಸಾಗುತ್ತಿದ್ದ ದೋಣಿ ಮುಳುಗಿ 12 ಮಕ್ಕಳ ಸಾವನ್ನಪ್ಪಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಮುಜಾಫರ್ಪುರ ನಗರದ ಬೆನೀವಾದ ವ್ಯಾಪ್ತಿಯ ಮಧುರಪಟ್ಟಿ ಘಾಟ್ನಲ್ಲಿ ತುಂಬಿ ಹರಿಯುತ್ತಿದ್ದ ಬಾಗಮತಿ ನದಿಯಲ್ಲಿ ದೋಣಿ ಮುಳುಗಡೆಯಾಗಿತ್ತು. ದೋಣಿಯಲ್ಲಿ 30ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಪ್ರಯಾಣಿಸುತ್ತಿದ್ದರೂ ಈ ವೇಳೆ ದುರ್ಘಟನೆ ಸಂಭವಿಸಿತ್ತು.
ಇದನ್ನೂ ಓದಿ: ದೋಣಿ ಮಗುಚಿ ಮೂವರು ಮಕ್ಕಳು, ಇಬ್ಬರು ಮಹಿಳೆಯರು ಸೇರಿ ಐವರ ದಾರುಣ ಸಾವು