ನವದೆಹಲಿ: ದ್ವಿಪಕ್ಷೀಯ ಸಂಬಂಧ, ಅಫ್ಘಾನಿಸ್ತಾನದ ಪ್ರಾದೇಶಿಕ ಸಮಸ್ಯೆಗಳು, ಪಾಕ್ ಪ್ರಾಯೋಜಿತ ಭಯೋತ್ಪಾದನೆ, ಇಂಡೋ ಪೆಸಿಫಿಕ್ ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚಿಸಲು ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಇಂದಿನಿಂದ ಎರಡು ದಿನಗಳ ಕಾಲ ಭಾರತದ ಪ್ರವಾಸ ಕೈಗೊಂಡಿದ್ದಾರೆ.
ಅಧಿಕಾರ ವಹಿಸಿಕೊಂಡ ನಂತರ ಬ್ಲಿಂಕೆನ್ ಅವರ ಭಾರತದ ಮೊದಲ ಭೇಟಿ ಇದಾಗಿದೆ. ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಪಾಕಿಸ್ತಾನ ಉಗ್ರರ ಸ್ವರ್ಗವಾಗುತ್ತಿರುವುದು, ಅಫ್ಘಾನಿಸ್ತಾನದಲ್ಲಿ ಅಮೆರಿಕ ಮತ್ತು ನ್ಯಾಟೋ ಪಡೆಗಳು ವಾಪಸಾಗುತ್ತಿರುವಂತೆಯೇ ತಾಲಿಬಾನ್ ಉಗ್ರರ ಬಲ ವರ್ಧನೆ, ಮುಂದಿನ ಹಂತದ ಎರಡೂ ದೇಶಗಳ ನಡುವಿನ ರಕ್ಷಣೆ ಮತ್ತು ವಿದೇಶಾಂಗ ಸಚಿವರ 2 ಪ್ಲಸ್ 2 ಸಭೆ, ಅದಕ್ಕಿಂತ ಮೊದಲು ರಕ್ಷಣೆ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಿಸಿದ ಪರಿಣತಿಗಳ ವಿನಿಮಯ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಬ್ಲಿಂಕೆನ್ ಚರ್ಚಿಸಲಿದ್ದಾರೆ.
ಅಮೆರಿಕ, ಆಸ್ಟ್ರೇಲಿಯಾ, ಭಾರತ, ಜಪಾನ್ ಲಸಿಕೆ ಪೂರೈಕೆ ನಿಟ್ಟಿನಲ್ಲಿ ಸಹಕಾರ ನೀಡುವುದು. ಭಾರತದಲ್ಲಿ ಉತ್ಪಾದನೆಯಾಗುವ ಲಸಿಕೆಗಳನ್ನು ವಿತರಣೆ, ಬಂಡವಾಳ ಹೂಡಿಕೆ, ಆರೋಗ್ಯ, ಶಿಕ್ಷಣ, ಡಿಜಿಟಲ್ ಕ್ಷೇತ್ರದಲ್ಲಿ ಸಹಕಾರದ ಬಗ್ಗೆಯೂ ಚರ್ಚೆಯಾಗಲಿದೆ.
ಇದನ್ನೂ ಓದಿ: 'ಬುಕರ್ ಪ್ರೈಜ್' ನಾಮಿನೇಷನ್: ಕಜುವೊ ಇಶಿಗುರೊ, ರಿಚರ್ಡ್ ಪವರ್ಸ್ ಸೇರಿ 13 ಲೇಖಕಕರ ನಾಮ ನಿರ್ದೇಶನ
ಅಫ್ಘಾನಿಸ್ತಾನದಿಂದ ಅಮೆರಿಕ ಪಡೆಗಳನ್ನು ಹಿಂಪಡೆದ ನಂತರ ಆಗುವ ಪರಿಣಾಮ ಹಾಗೂ ಭಯೋತ್ಪಾದಕ ಸಂಘಟನೆಗಳಿಗೆ ಪಾಕ್ ನೀಡುತ್ತಿರುವ ನೆರವಿನ ಬಗ್ಗೆಯೂ ಚರ್ಚೆಗೆ ಬರಲಿವೆ. ಕೋವಿಡ್ ಹಿನ್ನೆಲೆ ಕುಸಿದಿರುವ ಆರ್ಥಿಕತೆ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಬೆಳವಣಿಗೆ, ಪಶ್ಚಿಮ ಏಷ್ಯಾ ಮತ್ತು ಮಧ್ಯ ಏಷ್ಯಾಗೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆ ಕುರಿತು ಉಭಯ ರಾಷ್ಟ್ರಗಳ ಮಧ್ಯೆ ಮಾತುಕತೆ ನಡೆಯಲಿದೆ.