ನವದೆಹಲಿ: ಆಪ್ ಸರ್ಕಾರ ಮತ್ತು ಬಿಜೆಪಿ ಮುಖಂಡ ತೇಜಿಂದರ್ ಪಾಲ್ ಬಗ್ಗಾ ಮಧ್ಯೆ ಸಮರ ಮುಂದುವರಿದಿದೆ. ನಿನ್ನೆಯಷ್ಟೇ ತೇಜಿಂದರ್ ಪಾಲ್ ಬಗ್ಗಾರನ್ನು ಜುಲೈ 5ರವರೆಗೆ ಬಂಧಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಬಳಿಕ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಹರಿಹಾಯ್ದಿರುವ ಬಗ್ಗಾ, ನನ್ನ ಮೇಲೆ ಒಂದಲ್ಲ, ಸಾವಿರ ಕೇಸ್ ಹಾಕಿದರೂ ನಾನು ಹೆದರಲ್ಲ' ಎಂದು ಸವಾಲು ಹಾಕಿದ್ದಾರೆ.
ಹೈಕೋರ್ಟ್ ಆದೇಶ ನೀಡಿದ ಬಳಿಕ ಮೊದಲ ಬಾರಿಗೆ ಮಾಧ್ಯಮಗೋಷ್ಟಿ ನಡೆಸಿದ ಬಗ್ಗಾ, ಗುರು ಗ್ರಂಥ ಸಾಹಿಬ್ ತ್ಯಾಗ ಪ್ರಕರಣ, ಡ್ರಗ್ಸ್ ಮಾಫಿಯಾ ಮತ್ತು ಖಲಿಸ್ತಾನಿ ಪ್ರತ್ಯೇಕತಾವಾದಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದರು. ಕ್ರಮ ವಹಿಸದೇ ಇದ್ದುದನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನು ಪಂಜಾಬ್ ಪೊಲೀಸರು ಭಯೋತ್ಪಾದಕನಂತೆ ಬಿಂಬಿಸಿ, ಬಂಧಿಸಿದ್ದರು ಎಂದು ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಟೀಕಿಸಿದ್ದಾರೆ.
ಡ್ರಗ್ಸ್ ಮಾಫಿಯಾ ಮತ್ತು ಪ್ರತ್ಯೇಕತಾವಾದಿಗಳ, ಗುರು ಗ್ರಂಥ ಸಾಹಿಬ್ ಅವಮಾನಿಸಿದವರ ವಿರುದ್ಧ ಪಂಜಾಬ್ ಸರ್ಕಾರ ಕ್ರಮ ವಹಿಸಿಲ್ಲ. ಇದನ್ನು ಕೇಳುವುದು ತಪ್ಪೇ?. ನನ್ನ ವಿರುದ್ಧ ಒಂದಲ್ಲ, ಸಾವಿರ ಪ್ರಕರಣಗಳನ್ನು ದಾಖಲಿಸಿದರೂ ಇದನ್ನು ನಾನು ಪ್ರಶ್ನಿಸದೇ ಬಿಡುವುದಿಲ್ಲ ಎಂದು ಗುಡುಗಿದ್ದಾರೆ. ಜುಲೈ 5 ರವರೆಗೆ ಬಗ್ಗಾ ಅವರನ್ನು ಬಂಧಿಸದಂತೆ ಹರಿಯಾಣ ಮತ್ತು ಪಂಜಾಬ್ ಹೈಕೋರ್ಟ್ ಮಂಗಳವಾರ ಪಂಜಾಬ್ ಪೊಲೀಸರಿಗೆ ನಿರ್ದೇಶನ ನೀಡಿದೆ.
ಓದಿ: ತೇಜಿಂದರ್ ಪಾಲ್ ಬಗ್ಗಾಗೆ ಹೈಕೋರ್ಟ್ ರಿಲೀಫ್: ಜುಲೈ 5ರವರೆಗೆ ಬಂಧಿಸದಂತೆ ತಡೆ