ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ 'ಒಂದು ರಾಷ್ಟ್ರ, ಒಂದು ಚುನಾವಣೆ' ಹಾಗೂ ದೇಶದ ಹೆಸರನ್ನು 'ಭಾರತ' ಎಂದು ಮಾತ್ರ ಬಳಸುವ ಮಸೂದೆಯನ್ನು ಮಂಡಿಸಲು ಯೋಜಿಸಿದೆ ಎಂಬ ವರದಿಗಳು ಜೋರಾಗಿವೆ. ಈ ಕುರಿತು ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿ, ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟವು ಇದಕ್ಕೆ ತಡೆವೊಡ್ಡಲಿದೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 18ರಿಂದ 22ರವರೆಗೆ ಐದು ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನವನ್ನು ಕೇಂದ್ರ ಸರ್ಕಾರ ಕರೆದಿದೆ. ಈ ಅಧಿವೇಶನದ ಅಜೆಂಡಾ ಕುರಿತು ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಇದುವರೆಗೂ ಹೊರಬಿದ್ದಿಲ್ಲ. ಇದರ ನಡುವೆ ಒಂದು ರಾಷ್ಟ್ರ, ಒಂದು ಚುನಾವಣೆ ಮತ್ತು ದೇಶದ ಹೆಸರನ್ನು ಬದಲಿಸುವ ಎರಡು ಯೋಜನೆಗಳನ್ನು ಆಡಳಿತಾರೂಢ ಬಿಜೆಪಿ ಹೊಂದಿದೆ ಎಂಬ ಊಹಾಪೋಹಗಳು ಸಾಕಷ್ಟು ದಿನದಿಂದ ದಿನಕ್ಕೆ ದಟ್ಟವಾಗುತ್ತಿವೆ.
"ಸಂವಿಧಾನವು ದೇಶದ ಹೆಸರನ್ನು ಇಂಡಿಯಾವೇ ಭಾರತ, ರಾಜ್ಯಗಳ ಒಕ್ಕೂಟ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ನಮಗೆ ಇಂಡಿಯಾ ಹಾಗೂ ಭಾರತ ಎರಡೂ ಪದಗಳು ಒಂದೇ. ಆದರೆ, ಸರ್ಕಾರವು ದೇಶದ ಹೆಸರನ್ನು ಕೇವಲ 'ಭಾರತ' ಎಂದು ಬದಲಾಯಿಸಲು ಬಯಸಿದರೆ, ಇದಕ್ಕೆ ಸಂಸತ್ತಿನ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಮಸೂದೆ ಅಂಗೀಕರಿಸುವುದು ಅಗತ್ಯ'' ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯೆ ರಜನಿ ಪಾಟೀಲ್ 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ.
''ಮೇಲ್ಮನೆ (ರಾಜ್ಯಸಭೆ)ಯಲ್ಲಿ ಅವರಿಗೆ (ಬಿಜೆಪಿ) ಅಂತಹ ಬಹುಮತವಿಲ್ಲ. ಮಸೂದೆಗೆ ತಡೆ ಎದುರಿಸಬೇಕಾಗುತ್ತದೆ. ಇಂಡಿಯಾ ಮೈತ್ರಿಕೂಟದ ಪಕ್ಷಗಳು ಒಟ್ಟಾಗಿ ಮಸೂದೆಯನ್ನು ವಿರೋಧಿಸಲಿವೆ'' ಅವರು ಹೇಳಿದ್ದಾರೆ. ಇದೇ ವೇಳೆ, "ಒಂದು ರಾಷ್ಟ್ರ, ಒಂದು ಚುನಾವಣೆಯ ಕುರಿತು ಮತ್ತೊಂದು ಮಸೂದೆ ಮಂಡಿಸಿದರೆ, ಅದು ಕೂಡ ರಾಜ್ಯಸಭೆಯಲ್ಲಿ ತಡೆಯನ್ನು ಎದುರಿಸುತ್ತದೆ. ಇಷ್ಟೇ ಅಲ್ಲ, ಯಾವುದೇ ಸಾಂವಿಧಾನಿಕ ತಿದ್ದುಪಡಿಯನ್ನು ಶೇ.50ರಷ್ಟು ರಾಜ್ಯ ವಿಧಾನಸಭೆಗಳು ಅನುಮೋದಿಸಬೇಕಾಗುತ್ತದೆ. ಹೀಗಾಗಿ ಇದನ್ನು ಹೇಳುವುದು ಸುಲಭ ಮಾಡುವುದಕ್ಕಲ್ಲ'' ಎಂದು ಎಂದು ರಜನಿ ಪಾಟೀಲ್ ವಿವರಿಸಿದ್ದಾರೆ.
ಇದೇ ವೇಳೆ, ಸರ್ಕಾರವು ಯಾವುದೇ ಅಜೆಂಡಾವಿಲ್ಲದೇ ವಿಶೇಷ ಸಂಸತ್ ಅಧಿವೇಶನವನ್ನು ಘೋಷಿಸಿರುವುದೇ ವಿಚಿತ್ರವಾಗಿದೆ ಎಂದು ಟೀಕಿಸಿರುವ ರಜನಿ ಪಾಟೀಲ್, "ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲು ಸರ್ಕಾರ ನಿರ್ಧರಿಸಿದರೆ, ವಿರೋಧ ಪಕ್ಷಗಳೊಂದಿಗೆ ಮುಂಚಿತವಾಗಿ ಸಮಾಲೋಚನೆ ನಡೆಸಬೇಕು. ಸದಸ್ಯರ ನಡುವೆ ಕಾರ್ಯಸೂಚಿಯನ್ನು ಪ್ರಸಾರ ಮಾಡಬೇಕು. ಇದರಿಂದ ಅವರು ಸಿದ್ಧರಾಗಿ ಬಂದು ಸರಿಯಾದ ಚರ್ಚೆ ನಡೆಯಲು ಸಾಧ್ಯವಾಗುತ್ತದೆ. ಆದರೆ, ಈ ಬಾರಿ ಅಂಥದ್ದೇನೂ ಆಗುತ್ತಿಲ್ಲ. ಅಧಿವೇಶನದ ಅಜೆಂಡಾ ಏನೆಂದು ನಮಗೆ ಯಾವುದೇ ಸುಳಿವು ಇಲ್ಲ. ಆದರೆ ಅಲ್ಲಿ ತೆಗೆದುಕೊಳ್ಳಬಹುದಾದ ವಿವಿಧ ಪ್ರಸ್ತಾಪಗಳ ಬಗ್ಗೆ ನಾವು ಮಾಧ್ಯಮಗಳಲ್ಲೇ ಕೇಳುತ್ತಿದ್ದೇವೆ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಕಾಂಗ್ರೆಸ್ ನಾಯಕರಾದ ಸಿಡಬ್ಲ್ಯುಸಿ ಸದಸ್ಯ ಗುರುದೀಪ್ ಸಿಂಗ್ ಸಪ್ಪಲ್ ಕೂಡ ರಜನಿ ಪಾಟೀಲ್ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ. ''ರಾಷ್ಟ್ರದ ಹೆಸರನ್ನು ಭಾರತ ಎಂದು ಮಾತ್ರ ಬದಲಾಯಿಸಲು ಸಂವಿಧಾನದ ತಿದ್ದುಪಡಿಯ ಅಗತ್ಯವಿದೆ. ಆದರೆ, ರಾಜ್ಯಸಭೆಯಲ್ಲಿ ಬಿಜೆಪಿಗೆ ಮೂರನೇ ಎರಡರಷ್ಟು ಬಹುಮತವಿಲ್ಲ. ಹಾಗಾದರೆ, ಇಂತಹ ಬಲೂನ್ಗಳನ್ನು ಏಕೆ ತೇಲಿ ಬಿಡಲಾಗುತ್ತಿದೆ'' ಎಂದು ಪ್ರಶ್ನಿಸಿದ್ದಾರೆ.
ಅಧಿವೇಶನದ ಕುರಿತು ಕಾರ್ಯತಂತ್ರ ಬಗ್ಗೆ ಕಾಂಗ್ರೆಸ್ ಅಧ್ಯಕ್ಷತೆ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ 'ಇಂಡಿಯಾ' ಮೈತ್ರಿಕೂಟದ ನಾಯಕರು ಸಭೆ ಸೇರಿ ಚರ್ಚಿಸಿದ್ದಾರೆ. ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒಂಬತ್ತು ವಿಷಯಗಳ ಮೇಲೆ ಚರ್ಚೆಗೆ ಸಮಯಾವಕಾಶ ನೀಡಬೇಕೆಂದು ಕೋರಿದ್ದಾರೆ.