ಸಂಗಾರೆಡ್ಡಿ(ತೆಲಂಗಾಣ): ತೆಲಂಗಾಣದಲ್ಲೂ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿರುವ ಸಂಸದ ತೇಜಸ್ವಿ ಸೂರ್ಯ, ದಕ್ಷಿಣ ಭಾರತದ ಎರಡನೇ ರಾಜ್ಯದಲ್ಲಿ ಕಮಲ ಅರಳಲಿದೆ ಎಂದಿದ್ದಾರೆ.
ತೆಲಂಗಾಣದ ಸಂಗಾರೆಡ್ಡಿಯಲ್ಲಿ ಆಯೋಜನೆಗೊಂಡಿರುವ 'ಪ್ರಜಾಸಂಗ್ರಾಮ' ಪಾದಯಾತ್ರೆಯಲ್ಲಿ ಭಾಗಿಯಾದ ಬಳಿಕ ಈಟಿವಿ ಭಾರತ ಜೊತೆ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, 'ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುವವರೆಗೂ ನಮ್ಮ ಕಾರ್ಯಕರ್ತರು ವಿಶ್ರಾಂತಿ ಪಡೆದುಕೊಳ್ಳಬಾರದು. ಬರುವ ಸೆಪ್ಟೆಂಬರ್ 17 ನಮಗೆ ಅತ್ಯಂತ ಮಹತ್ವದ್ದಾಗಿದ್ದು, ತೆಲಂಗಾಣದ ರಾಜಕೀಯದ ದಿಕ್ಕು ಬದಲಾಗಲಿದೆ' ಎಂದು ಹೇಳಿದರು.
ಸಿಎಂ ಕೆಸಿಆರ್ ವಿರುದ್ಧ ವಾಗ್ದಾಳಿ
ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ವೇಳೆ ಮುಖ್ಯಮಂತ್ರಿ ಕೆಸಿಆರ್ ವಿರುದ್ಧ ವಾಗ್ದಾಳಿ ನಡೆಸಿದ ತೇಜಸ್ವಿ ಸೂರ್ಯ, 'ಚುನಾವಣೆ ವೇಳೆ ಈ ಪಕ್ಷ ನೀಡಿದ್ದ ಭರವಸೆ ಈಡೇರಿಕೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ದಲಿತರಿಗೆ ಮೂರು ಎಕರೆ ಜಮೀನು, 2BHK ಮನೆ ಹಾಗೂ ಮಳೆಯಿಂದ ತೊಂದರೆಗೊಳಗಾಗುವ ಕುಟುಂಬಗಳಿಗೆ 10,000 ರೂ. ನೀಡುವುದಾಗಿ ತಿಳಿಸಿತ್ತು. ಆದರೆ ಈ ಭರವಸೆ ಈಡೇರಿಸುವಲ್ಲಿ ಸರ್ಕಾರ ವಿಫಲಗೊಂಡಿದೆ. ಕೇವಲ ಕುಟುಂಬ ರಾಜಕಾರಣ ಮಾಡುವತ್ತ ಕೆಸಿಆರ್ ಗಮನ ಹರಿಸಿದ್ದಾರೆ' ಎಂದರು.
![MP Tejaswi Surya](https://etvbharatimages.akamaized.net/etvbharat/prod-images/13006660_thumbn.jpg)
ಇದನ್ನೂ ಓದಿ: ವಿಜಯಪುರ: ಜೆಸಿಬಿ ಯಂತ್ರದಲ್ಲಿ ಸಿಲುಕಿ ಚಾಲಕ, ಪೌರ ಕಾರ್ಮಿಕ ದಾರುಣ ಸಾವು
2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಆಡಳಿತಕ್ಕೆ ಬರುವುದು ಖಚಿತ. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದರು.