ಸಾಗರದಿಘಿ (ಮುರ್ಷಿದಾಬಾದ್): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಈ ಬಾರಿ ಬುಲ್ಡೋಜರ್ ಸಂಸ್ಕೃತಿಯ ಬಗ್ಗೆ ಬಿಜೆಪಿ ವಿರುದ್ಧ ಅವರು ಕಿಡಿಕಾರಿದ್ದಾರೆ. ಸೋಮವಾರ ಮುರ್ಷಿದಾಬಾದ್‌ನ ಸಾಗರದಿಘಿಯಲ್ಲಿ ಮಾತನಾಡಿದ ಅವರು, ಬುಲ್ಡೋಜರ್‌ಗಳ ಬದಲಿಗೆ, ನೀವೇ ಮುಚ್ಚಲ್ಪಡುವಿರಿ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದರು.
ಮುರ್ಷಿದಾಬಾದ್‌ನ ಸಾಗರದಿಘಿಯಲ್ಲಿ ಆಡಳಿತಾತ್ಮಕ ಸಭೆ ನಡೆಸಿದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಹಲವಾರು ವಿಷಯಗಳನ್ನೆತ್ತಿ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ಆಡಳಿತದ ವಿವಿಧ ರಾಜ್ಯ ಸರ್ಕಾರಗಳು ಬುಲ್ಡೋಜರ್‌ಗಳಿಂದ ಆರೋಪಿಗಳ ಮನೆಗಳನ್ನು ಕೆಡವುವ ವಿಷಯವನ್ನು ಅವರು ಕೆಣಕಿದರು. ಈ ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದ ಅವರು, ನಾನು ಬುಲ್ಡೋಜರ್‌ಗಳ ಪರವಾಗಿಲ್ಲ, ಬುಲ್ಡೋಜರ್ ಅಲ್ಲ, ಬುಲ್ಡೋಜರ್ ಬದಲಿಗೆ ನೀವು ಮುಚ್ಚಲ್ಪಡುವಿರಿ ಎಂದು ಹೇಳಿದರು.
ಕೇಂದ್ರ ಸರ್ಕಾರ ತಮ್ಮ ರಾಜ್ಯಕ್ಕೆ ತನ್ನ ಯೋಜನೆಗಳ ಪ್ರಯೋಜನ ನೀಡುವುದಿಲ್ಲ ಎಂದು ಆರೋಪಿಸಿದ ಅವರು, ಕೇಂದ್ರ ಸರ್ಕಾರ ರಾಜ್ಯಗಳಿಗೆ ವಿಶಾಲ ಮನೋಭಾವದಿಂದ ಹಣ ನೀಡುವುದಿಲ್ಲ ಎಂದು ದೂರಿದರು. ಇಲ್ಲಿಂದ ತೆರಿಗೆ ಸಂಗ್ರಹಿಸಲಾಗುತ್ತದೆ. ಆದರೆ, ನಂತರ ಉಳಿದದ್ದನ್ನು ರಾಜ್ಯದ ಪಾಲಿಗೆ ಕೊಡುತ್ತಾರೆ. ಇದು ಬಿಜೆಪಿಯ ಜಮೀನ್ದಾರಿ ಎಂದು ಯಾರಾದರೂ ಭಾವಿಸಿದರೆ, ಜನರನ್ನು ಕೊಂದು ಈ ಸರ್ಕಾರ ಮುಂದುವರಿಯುವುದಿಲ್ಲ.
ರಾಮ್-ಬಾಮ್-ಶ್ಯಾಮ್ ಒಂದಾದರು ಎಂದು ಮಮತಾ ಬ್ಯಾನರ್ಜಿ ಟೀಕಿಸಿದರು. ಅಧಿಕಾರದ ದರ್ಪ ತೋರಿಸಿದ್ದಕ್ಕೆ ನಿಮಗೆ ನಾಚಿಕೆಯಾಗಬೇಕು. ಈ ಶಕ್ತಿ ಇವತ್ತು ಇದೆ, ನಾಳೆ ನಿಮ್ಮ ಬಳಿ ಇಲ್ಲದಿರಬಹುದು. ಇಂದು ಅಧಿಕಾರದಲ್ಲಿ ಇದ್ದೀರಿ ಹಾಗಾಗಿ ಹೀರೋ ಆಗಿರುವಿರಿ. ನಾಳೆ ಅಧಿಕಾರದಲ್ಲಿ ಇರಲ್ಲ. ಆಗ ನೀವು ದೊಡ್ಡ ಶೂನ್ಯವಾಗುವಿರಿ ಎಂದು ಯಾರನ್ನೂ ಹೆಸರಿಸದೇ ಮಮತಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಮತಾ ಬಗ್ಗೆ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಮಾತು: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾರತದ ಮುಂದಿನ ಪ್ರಧಾನಿಯಾಗುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಅವರು ಬಿಜೆಪಿ ವಿರುದ್ಧದ ಸಾರ್ವಜನಿಕರ ಆಕ್ರೋಶದ ಶಕ್ತಿಗಳನ್ನು ಸೆಳೆಯಬಲ್ಲರೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಇತ್ತೀಚೆಗೆ ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಸಿಎಂ ಮಮತಾ ಬ್ಯಾನರ್ಜಿ ಅಮರ್ತ್ಯ ಅವರ ಸಲಹೆ ಆದೇಶವಾಗಿದೆ ಎಂದು ಹೇಳಿದರು. ಅಮರ್ತ್ಯ ಸೇನ್ ವಿಶ್ವವಿಖ್ಯಾತ ಬುದ್ಧಿಜೀವಿ. ಅವರ ದೃಷ್ಟಿಕೋನ ನಮಗೆ ಮಾರ್ಗವನ್ನು ತೋರಿಸುತ್ತದೆ. ಅವರ ಸಲಹೆ ನಮಗೆ ಆದೇಶವಾಗಿದೆ. ಅವರ ಒಳನೋಟ ಮತ್ತು ದೇಶದ ಪ್ರಸ್ತುತ ಪರಿಸ್ಥಿತಿಯ ಮೌಲ್ಯಮಾಪನವನ್ನು ಪ್ರತಿಯೊಬ್ಬರೂ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಮಮತಾ ಹೇಳಿದ್ದರು.
ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮರ್ತ್ಯ ಸೇನ್, 2024 ರ ಲೋಕಸಭಾ ಚುನಾವಣೆಯು ಬಿಜೆಪಿಯ ಪರವಾಗಿ ಒಂದೇ ಕುದುರೆ ಓಡುವ ಸ್ಪರ್ಧೆ ಎಂದು ಭಾವಿಸುವುದು ತಪ್ಪಾಗಬಹುದು. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಹಲವಾರು ಪ್ರಾದೇಶಿಕ ಪಕ್ಷಗಳ ಪಾತ್ರ ಕೂಡ ಬಹಳ ಮುಖ್ಯವಾಗಿರಲಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ದೋಷಪೂರಿತ ಫಾಸ್ಟ್ಟ್ಯಾಗ್ ದಂಡ ಸಂಗ್ರಹದ ಅಂಕಿ - ಅಂಶಗಳಿಲ್ಲ ಎಂದ ಎನ್ಎಚ್ಎಐ!