ಜೈಪುರ (ರಾಜಸ್ಥಾನ) : ಪಂಚರಾಜ್ಯಗಳ ಪೈಕಿ ಮೂರು ರಾಜ್ಯಗಳನ್ನು ಗೆದ್ದಿರುವ ಬಿಜೆಪಿ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶಕ್ಕೆ ಮುಖ್ಯಮಂತ್ರಿಗಳನ್ನು ಅಂತಿಮಗೊಳಿಸಿದೆ. ಕಾಂಗ್ರೆಸ್ ಆಡಳಿತದಲ್ಲಿದ್ದ ರಾಜಸ್ಥಾನವನ್ನು ತನ್ನ ಕೈವಶ ಮಾಡಿಕೊಂಡಿದ್ದು, ಈಗ ಹೊಸ ಸಿಎಂ ಆಯ್ಕೆಯ ಕಸರತ್ತು ನಡೆಸುತ್ತಿದೆ. ಇಂದು ಸಂಜೆ 4 ಗಂಟೆಗೆ ಶಾಸಕಾಂಗ ಸಭೆ ಕರೆಯಲಾಗಿದೆ. ಮುಂದಿನ ಸಿಎಂ ಯಾರೆಂಬುದು ಇಂದೇ ಹೊರಬೀಳಲಿದೆ.
ಸಿಎಂ ಸ್ಥಾನಕ್ಕೆ ಆಕಾಂಕ್ಷಿಗಳ ದಂಡೇ ಇರುವ ಕಾರಣ ಹೈಕಮಾಂಡ್ಗೆ ಆಯ್ಕೆಯು ತುಸು ತಲೆನೋವಾಗಿದೆ. ಚುನಾವಣೆ ಮುಗಿದು 10 ದಿನ ಕಳೆದರೂ ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ಕೇಂದ್ರದ ವೀಕ್ಷಕರು ಇಂದು ರಾಜಸ್ಥಾನಕ್ಕೆ ತೆರಳಲಿದ್ದು, ಸಿಎಂ ಯಾರೆಂಬುದನ್ನು ಘೋಷಿಸಲಿದ್ದಾರೆ.
ಚುನಾವಣೆಗೂ ಮುನ್ನ ಸಿಎಂ ಅಭ್ಯರ್ಥಿಯನ್ನು ಘೋಷಿಸದೆ ಪ್ರಚಾರ ನಡೆಸಲಾಗಿತ್ತು. ಅದರಿಂದ ಯಶಸ್ಸು ಕೂಡ ದಕ್ಕಿದೆ. ಮಾಜಿ ಸಿಎಂ ವಸುಂಧರಾ ರಾಜೆ ಮತ್ತು ಭೈರೋವ್ ಸಿಂಗ್ ಶೇಖಾವತ್ ಅವರ ಮಧ್ಯೆ ಸಿಎಂ ಹುದ್ದೆಗೆ ತೀವ್ರ ಪೈಪೋಟಿ ಎದ್ದಿದೆ. ಆದರೆ, ಈ ಬಾರಿ ಪಕ್ಷವು ತನ್ನ ತಂತ್ರವನ್ನು ಬದಲಿಸಲಿದೆ. ಹೊಸ ಮುಖಕ್ಕೆ ಮಣೆ ಹಾಕುವ ಸಾಧ್ಯತೆ ಇದೆ.
ಎಲ್ಲ ಶಾಸಕರ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಂಡ ನಂತರ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಇದೇ ಪ್ರಕ್ರಿಯೆಯನ್ನು ಅನುಸರಿಸಲಾಗಿತ್ತು. ಅದಕ್ಕಾಗಿ ವೀಕ್ಷಕರ ತಂಡದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಹ ವೀಕ್ಷಕರಾದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಸರೋಜ್ ಪಾಂಡೆ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಸೇರಿದಂತೆ ದೆಹಲಿಯಿಂದ ನೇಮಕಗೊಂಡ ವೀಕ್ಷಕರು ಇಂದಿನ ಶಾಸಕಾಂಗ ಸಭೆಯಲ್ಲಿ ಹಾಜರಾಗಿ ಸಿಎಂ ಆಯ್ಕೆಯ ಪ್ರಕ್ರಿಯೆಯನ್ನು ಮುಗಿಸಲಿದ್ದಾರೆ.
ಸಿಎಂ ರೇಸ್ನಲ್ಲಿರುವ ಅಭ್ಯರ್ಥಿಗಳು: ರಾಜಸ್ಥಾನ ಸಿಎಂ ಸ್ಥಾನದ ರೇಸ್‌ನಲ್ಲಿ ಹಲವು ಘಟಾನುಘಟಿಗಳ ಹೆಸರಿದೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಬಿಜೆಪಿಯ ಹಿರಿಯ ನಾಯಕ ಓಂ ಮಾಥುರ್, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ಸಚಿವ ಅರ್ಜುನ್ ಮೇಘವಾಲ್, ಕೇಂದ್ರ ಸಚಿವ ಅಶ್ವನಿ ವೈಷ್ಣವ್, ದಿಯಾ ಕುಮಾರಿ, ಬಾಬಾ ಬಾಲಕನಾಥ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸಿಪಿ ಜೋಶಿ ಅವರು ಆಕಾಂಕ್ಷಿಗಳಾಗಿದ್ದಾರೆ. ಮಾಜಿ ಸಿಎಂ ವಸುಂಧರಾ ರಾಜೆ, ಕೆಲ ಶಾಸಕರ ಸಮೇತ ದಿಲ್ಲಿಯಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. ಜೊತೆಗೆ ಬಾಬಾ ಬಾಲಕನಾಥ್ ಅವರು ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ ಸಿಎಂ ಆಗಿ ಮೋಹನ್ ಯಾದವ್ ಅಚ್ಚರಿ ಆಯ್ಕೆ: ಇಬ್ಬರಿಗೆ ಡಿಸಿಎಂ ಸ್ಥಾನ