ಕೋಲ್ಕತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಪ್ರಣಾಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸೋನಾರ್ ಬಾಂಗ್ಲಾಕ್ಕೆ ಸಂಕಲ್ಪ ಪತ್ರ ಎಂದು ಕರೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದು ಕೇವಲ ಪ್ರಣಾಳಿಕೆ ಮಾತ್ರವಲ್ಲ, ಪಶ್ಚಿಮ ಬಂಗಾಳಕ್ಕೆ ದೇಶದ ಅತಿದೊಡ್ಡ ಪಕ್ಷದ ನಿರ್ಣಯ ಪತ್ರವಾಗಿದೆ ಎಂದಿದ್ದಾರೆ.
ಕೋಲ್ಕತ್ತಾದ ಸಾಲ್ಟ್ ಲೇಕ್‌ನ ಪೂರ್ವ ವಲಯ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ, ಕೇಂದ್ರ ಸಚಿವ ದೇಬಶ್ರೀ ಚೌಧುರಿ ಮತ್ತು ಪಕ್ಷದ ಸಂಸದ ನಿಸಿತ್ ಪ್ರಾಮಾಣಿಕ್ ಉಪಸ್ಥಿತರಿದ್ದರು.
294 ಸದಸ್ಯರ ಬಲ ಹೊಂದಿರುವ ರಾಜ್ಯ ವಿಧಾನಸಭೆಗೆ ಮಾರ್ಚ್ 27 ರಿಂದ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಅಂತಿಮ ಸುತ್ತಿನ ಮತದಾನ ಏಪ್ರಿಲ್ 29 ರಿಂದ ನಡೆಯಲಿದೆ. ಮತ ಎಣಿಕೆ ಮೇ 2 ರಂದು ಜರುಗಲಿದ್ದು, ಅಂದೇ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಹೊರಬೀಳಲಿದೆ.
ಪ್ರಣಾಳಿಕೆಯ ಪ್ರಮುಖಾಂಶಗಳು:
- ಪಶ್ಚಿಮ ಬಂಗಾಳದ ಮಹಿಳೆಯರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ. 33 ಮೀಸಲಾತಿ
- ಧರ್ಮವನ್ನು ಲೆಕ್ಕಿಸದೆ ಎಲ್ಲಾ ಹಬ್ಬಗಳ ಆಚರಣೆ
- ಕೆಜಿಯಿಂದ ಪಿಜಿಯವರೆಗೆ ಬಾಲಕಿಯರಿಗೆ ಉಚಿತ ಶಿಕ್ಷಣ
- ಮೊದಲ ಸಂಪುಟದಲ್ಲಿ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನ
- ಗಡಿಯನ್ನು ಬಲಪಡಿಸುವುದು. ಒಳನುಸುಳುವಿಕೆಯನ್ನು ಪರಿಶೀಲಿಸಲು ಸಿಸಿಟಿವಿ ಹಾಗೂ ಫೆನ್ಸಿಂಗ್ ಸ್ಥಾಪನೆ
- ಮೀನುಗಾರರಿಗೆ ಪ್ರತಿ ವರ್ಷ 6,000 ರೂ. ಬಿಡುಗಡೆ
- ನಿರಾಶ್ರಿತರ ಕುಟುಂಬಗಳಿಗೆ ಪ್ರತಿ ವರ್ಷ 10,000 ರೂ. ಪರಿಹಾರ
- 3 ಏಮ್ಸ್ ರಚನೆ - ಉತ್ತರ ಬಂಗಾಳ, ಜಂಗಲ್ಮಹಲ್ ಮತ್ತು ಸುಂದರಬನ್ ಜನರಿಗೆ ಅನುಕೂಲ
- 11,000 ಕೋಟಿ ರೂ.ಗಳ ಮೌಲ್ಯದ ಸೋನಾರ್ ಬಾಂಗ್ಲಾ ನಿಧಿಯ ರಚನೆ
- ಆಯುಷ್ಮಾನ್ ಭಾರತ್ ಯೋಜನೆ ಅನುಷ್ಠಾನ
- ಏಳನೇ ವೇತನ ಆಯೋಗದ ಪರಿಣಾಮಕಾರಿ ಜಾರಿ
- ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
- ರಾಜಕೀಯ ಹಿಂಸಾಚಾರದ ಬಗ್ಗೆ ಎಸ್‌ಐಟಿ ತನಿಖೆ
- ಮುಂದುವರಿದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ, 3 ವರ್ಷದಿಂದ ರೈತರಿಗೆ ನೀಡಲಾಗಿಲ್ಲ ಎಂದು ಹೇಳಲಾದ 18,000 ರೂ. ಅನ್ನು ಯಾವುದೇ ಕಡಿತವಿಲ್ಲದೆ 75 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು
- ಭ್ರಷ್ಟಾಚಾರದ ಬಗ್ಗೆ ಪರಿಶೀಲನೆ ನಡೆಸಲು ಎಲ್ಲಾ ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ ನಡೆಸಲಾಗುವುದು