ಮುಂಬೈ: ವಿಧಾನಸಭಾ ಚುನಾವಣೆಗಳು ಮುಗಿದ ನಂತರ ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದಿರುವ ರಾಜಕೀಯ ಹಿಂಸಾಚಾರವು ಅಲ್ಲಿನ ರಾಜಕೀಯದ ಕರಾಳ ಮುಖಕ್ಕೆ ಸಾಕ್ಷಿಯಾಗಿದ್ದು, ಅಲ್ಲಿ ಪ್ರಜಾಪ್ರಭುತ್ವದ ಬದಲಾಗಿ ಬಲವಿದ್ದವರ ಆಟ ನಡೆಯುವುದನ್ನು ತೋರಿಸಿಕೊಟ್ಟಿದೆ ಎಂದು ಶಿವಸೇನೆ ಹೇಳಿದೆ.
ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವುದು ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಎರಡರದ್ದೂ ಜವಾಬ್ದಾರಿಯಾಗಿದೆ ಎಂದು ಶಿವಸೇನಾ ಪ್ರತಿಪಾದಿಸಿದೆ.
"ಪಶ್ಚಿಮ ಬಂಗಾಳದಲ್ಲಿ ವಾಸ್ತವದಲ್ಲಿ ನಡೆಯುತ್ತಿರುವುದಾದರೂ ಏನು? ಇದರ ಹಿಂದೆ ಯಾರ ಕೈವಾಡವಿದೆ? ಈ ಎಲ್ಲ ವಿಷಯಗಳು ಸ್ಪಷ್ಟವಾಗಬೇಕಿವೆ. ರಾಜ್ಯದಲ್ಲಿ ಬಿಜೆಪಿ ಚುನಾವಣೆಗಳಲ್ಲಿ ಸೋತ ನಂತರ ಹಿಂಸಾಚಾರ ಹೆಚ್ಚಾಗಿರುವ ವರದಿಗಳು ಬರುತ್ತಿವೆ. ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದೆಲ್ಲವೂ ಒಂದು ವ್ಯವಸ್ಥಿತ ಅಪಪ್ರಚಾರದ ಭಾಗವಾಗಿದೆ." ಎಂದು ಶಿವಸೇನೆ ತನ್ನ ಮುಖವಾಣಿ ಪತ್ರಿಕೆ ಸಾಮ್ನಾ ಸಂಪಾದಕೀಯದಲ್ಲಿ ಹೇಳಿದೆ.
ಚುನಾವಣೆಗಳ ನಂತರ ಹಿಂಸಾಚಾರದಲ್ಲಿ ಮೃತಪಟ್ಟ 17 ಜನರ ಪೈಕಿ 9 ಜನ ಬಿಜೆಪಿ ಹಾಗೂ ಇನ್ನುಳಿದ 8 ಜನ ಟಿಎಂಸಿಗೆ ಸೇರಿದವರಾಗಿದ್ದಾರೆ. ಅಂದರೆ ಹಿಂಸಾಚಾರದಲ್ಲಿ ಎರಡೂ ಕಡೆಯವರು ಭಾಗಿಯಾಗಿದ್ದಾರೆ ಎಂದು ಸಂಪಾದಕೀಯದಲ್ಲಿ ಅಭಿಪ್ರಾಯಪಡಲಾಗಿದೆ.
"ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಪಾಲರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಮಧ್ಯೆ ಹಿಂಸಾಚಾರಕ್ಕೆ ಸಿಎಂ ಮಮತಾ ಬ್ಯಾನರ್ಜಿಯೇ ಕಾರಣವೆಂದು ಆರೋಪಿಸಿ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಆಗ್ರಹಿಸಿ ಬಿಜೆಪಿಯ ಹಿರಿಯ ನಾಯಕರೊಬ್ಬರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೆಲ್ಲ ನೋಡಿದರೆ ಬಿಜೆಪಿಯೇ ಯಾವುದೋ ಕುತಂತ್ರ ನಡೆಸುತ್ತಿರುವಂತೆ ಕಾಣುತ್ತಿದೆ." ಎಂದು ಶಿವಸೇನೆ ಆರೋಪಿಸಿದೆ.