ನವದಹೆಲಿ: ಜನಸಂಖ್ಯೆ ನಿಯಂತ್ರಣ ಮತ್ತು ಸಾಮಾನ್ಯ ಪೌರತ್ವ ಕುರಿತು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಖಾಸಗಿ ಮಸೂದೆಗಳನ್ನು ಪರಿಚಯಿಸಲು ಬಿಜೆಪಿ ಸಂಸದರು ಯೋಜನೆ ರೂಪಿಸಿಕೊಂಡಿದ್ದಾರೆ. ಜುಲೈ 19 ರಂದು ಸಂಸತ್ತಿನ ಅಧಿವೇಶನಗಳು ಪ್ರಾರಂಭವಾಗುತ್ತಿದ್ದಂತೆ, ಸದನವು ಈ ಖಾಸಗಿ ಮಸೂದೆಗಳನ್ನು ಮೊದಲ ವಾರವೇ ಕಲಾಪದ ಮುಂದಿಡಲಿದ್ದಾರೆ.
ಉಭಯ ಸದನಗಳ ಕಾರ್ಯದರ್ಶಿಗಳು ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಲೋಕಸಭೆಯ ಸಂಸದ ರವಿ ಕಿಶನ್ ಮತ್ತು ರಾಜ್ಯಸಭೆಯ ಕಿರೋರಿ ಲಾಲ್ ಮೀನಾ ಜುಲೈ 24 ರಂದು ಮಸೂದೆಗಳನ್ನು ಮಂಡಿಸಲಿದ್ದಾರೆ. ಮತ್ತೊಬ್ಬ ರಾಜ್ಯಸಭಾ ಸಂಸದ ರಾಕೇಶ್ ಸಿನ್ಹಾ ಕೂಡ ಜನಸಂಖ್ಯೆ ನಿಯಂತ್ರಣದ ಬಗ್ಗೆ ನೋಟಿಸ್ ನೀಡಿದ್ದಾರೆ. ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗಳಿಗೆ ಸರ್ಕಾರ ಪ್ರೋತ್ಸಾಹ ನೀಡಬಾರದು ಎಂದು ಪ್ರಸ್ತಾವಿತ ಕಾನೂನು ಹೇಳುತ್ತದೆ.
ಜನಸಂಖ್ಯೆಯ ಬೆಳವಣಿಗೆಯು ದೇಶದಲ್ಲಿ ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ ಎಂದು ಹೇಳಲಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರದ ಕಾನೂನು ಅತ್ಯಗತ್ಯ ಎಂದು ಬಿಜೆಪಿ ತನ್ನ ಸೈದ್ಧಾಂತಿಕ ಕಾರ್ಯಸೂಚಿಯ ಭಾಗವಾಗಿ ಉದ್ದೇಶಿತ ಸಾಮಾನ್ಯ ಪೌರತ್ವ ಮತ್ತು ಜನಸಂಖ್ಯಾ ನಿಯಂತ್ರಣ ಕಾಯ್ದೆಗಳನ್ನು ಪರಿಗಣಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಇವುಗಳ ಬಗ್ಗೆ ದೇಶದ ವಿವಿಧ ವರ್ಗಗಳಿಂದ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಖಾಸಗಿ ಬಿಲ್ ಎಂದರೇನು?
ಸಚಿವರು ಅಲ್ಲದೆ ಸಾಮಾನ್ಯ ಸಂಸದರು ಮಂಡಿಸುವ ಮಸೂದೆಗಳನ್ನು ಖಾಸಗಿ ಮಸೂದೆಗಳು ಎಂದು ಕರೆಯಲಾಗುತ್ತದೆ. ಸರ್ಕಾರದ ಬೆಂಬಲವಿಲ್ಲದೆ ರಚಿಸಲಾದ ಈ ಮಸೂದೆಗಳಿಗೆ ಕಾನೂನು ರೂಪ ಸಿಗುವುದು ಸಾಧ್ಯತೆ ತೀರಾ ಕಡಿಮೆ. 1970 ರಿಂದೀಚೆಗೆ ಒಬ್ಬ ಖಾಸಗಿ ಸದಸ್ಯರ ಮಸೂದೆ ಸಂಸತ್ತಿನ ಮಿತಿಯನ್ನು ದಾಟಿಲ್ಲ.