ನವದೆಹಲಿ: ಹಿಮಾಚಲ ಪ್ರದೇಶದ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ಅವರು ದೆಹಲಿಯ ತಮ್ಮ ನಿವಾಸದಲ್ಲಿ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ.
ಮಂಡಿಯ 62 ವರ್ಷದ ಶರ್ಮಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಅವರ ಮನೆಯ ಒಳಗಿನಿಂದ ಬಾಗಿಲು ಬೋಲ್ಟ್ ಹಾಕಿಕೊಂಡಿದ್ದು, ಶರ್ಮಾ ಅವರನ್ನು ನೇಣು ಬಿಗಿದ ಸ್ಥಿತಿಯಲ್ಲಿ ನೋಡಿದ ಸ್ಥಳೀಯರು ದೆಹಲಿ ಪೊಲೀಸರಿಗೆ ಕರೆ ಮಾಡಿದ್ದಾರೆ.
ಇದನ್ನೂ ಓದಿ: ಬಂಗಾಳ ಚುನಾವಣೆ: ಇಂದು ಟಿಎಂಸಿ ಪ್ರಣಾಳಿಕೆ ಬಿಡುಗಡೆ ಸಾಧ್ಯತೆ
ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ. ಶರ್ಮಾ ಅವರ ಸಾವಿನಿಂದಾಗಿ ಬಿಜೆಪಿ ಸಂಸದೀಯ ಪಕ್ಷದ ಸಭೆ ರದ್ದುಗೊಂಡಿದೆ.
1958ರಲ್ಲಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಜನಿಸಿದ ಶರ್ಮಾ ಎರಡು ಬಾರಿ ಸಂಸದರಾಗಿದ್ದರು. 2014ರಲ್ಲಿ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾದರು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮಂಡಿ ಕ್ಷೇತ್ರದಿಂದ ಮರು ಆಯ್ಕೆಯಾದರು. ಅವರು ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯಲ್ಲೂ ಸೇವೆ ಸಲ್ಲಿಸಿದ್ದರು. ರಾಮ್ ಸ್ವರೂಪ್ ಶರ್ಮಾ ಅವರಿಗೆ ಪತ್ನಿ ಮತ್ತು ಮೂವರು ಗಂಡು ಮಕ್ಕಳಿದ್ದಾರೆ.