ಅಹ್ಮದಾಬಾದ್ (ಗುಜರಾತ್): ಗುಜರಾತ್ನ ಬಿಜೆಪಿ ಶಾಸಕ ವಿಜಯ್ ಪಟೇಲ್ ಅವರನ್ನು ಶಬರಿಧಾಮ ಮಂದಿರ ಟ್ರಸ್ಟ್ನಿಂದ ವಜಾಗೊಳಿಸಲಾಗಿದೆ. ಆದರೆ, ಟ್ರಸ್ಟ್ನಿಂದ ಅವರನ್ನು ಕೈಬಿಟ್ಟಿರುವುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಡಾಂಗ್ ಕ್ಷೇತ್ರದ ಶಾಸಕರಾದ ವಿಜಯ್ ಪಟೇಲ್ ಇತ್ತೀಚೆಗೆ ಕ್ರಿಶ್ಚಿಯನ್ ಸಮುದಾಯದವರನ್ನು ದೇವಸ್ಥಾನದೊಳಗೆ ಕರೆದುಕೊಂಡು ಹೋಗಿದ್ದರು. ಹೀಗಾಗಿ ಅವರನ್ನು ಟ್ರಸ್ಟಿ ಸ್ಥಾನದಿಂದ ತೆಗೆದು ಹಾಕಲಾಗಿದೆ ಎನ್ನಲಾಗುತ್ತಿದೆ. ಆದರೆ, ಇದನ್ನೂ ಸ್ವತಃ ಶಾಸಕರೇ ತಳ್ಳಿ ಹಾಕಿದ್ದಾರೆ.
ಈ ಬಗ್ಗೆ ಮತ್ತೊಬ್ಬ ಟ್ರಸ್ಟಿ ಕಿಶೋರ್ ಗವೀತ್ ಮಾತನಾಡಿದ್ದು, ಜೂ.6ರಂದು ವಿಜಯ್ ಪಟೇಲ್ ಕ್ರಿಶ್ಚಿಯನ್ ಸಮುದಾಯವರನ್ನು ದೇವಸ್ಥಾನದೊಳಗೆ ಕರೆದುಕೊಂಡು ಬಂದಿದ್ದರು. ಇದು ದೇವಸ್ಥಾನದ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ಅವರ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ, ಪಟೇಲ್ ಅವರೊಂದಿಗೆ ಆದಿವಾಸಿ ಕಲ್ಯಾಣ ಖಾತೆಯ ಮಾಜಿ ಸಚಿವ ಗಣಪತ್ ಸಿನ್ಹಾ ಹಾಗೂ ಮೂರ್ನಾಲ್ಕು ಜನ ಕ್ರಿಶ್ಚಿಯನ್ ಸಮುದಾಯದವರೂ ಗರ್ಭದ್ವಾರ ಬಳಿಗೆ ತೆರಳಿದ್ದರು ಎಂದು ತಿಳಿಸಿದ್ದಾರೆ.
ಮುಂದುವರೆದು, ಆದಿವಾಸಿ ಜನರನ್ನು ಕ್ರಿಶ್ಚಿಯನ್ಗೆ ಮತಾಂತರವಾಗುವುದನ್ನು ತಡೆಯುವ ಉದ್ದೇಶದಿಂದಲೇ 2014ರಲ್ಲಿ ಶಬರಿಧಾಮ ಮಂದಿರ ಸ್ಥಾಪಿಸಲಾಗಿದೆ. ಶ್ರೀರಾಮನಿಗೆ ಹಣ್ಣುಗಳನ್ನು ತಿನ್ನಿಸಿದ ಆದಿವಾಸಿ ಮಹಿಳೆ ಶಬರಿ ನೆನಪಿನಲ್ಲಿ ಈ ದೇವಸ್ಥಾನ ನಿರ್ಮಿಸಲಾಗಿದೆ. ರಾಮಾಯಣದ ಸಂದರ್ಭದಲ್ಲಿ ಶಬರಿ ಇದೇ ಸ್ಥಳದಲ್ಲಿ ವಾಸುತ್ತಿದ್ದರು ಎಂಬ ನಂಬಿಕೆ ಎಂದು ಕಿಶೋರ್ ವಿವರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ವಿಜಯ್ ಪಟೇಲ್, ನಾನು ಯಾವ ಕ್ರಿಶ್ಚಿಯನ್ ಸಮುದಾಯದವರನ್ನು ದೇವಸ್ಥಾನದೊಳಗೆ ಕರೆದುಕೊಂಡು ಹೋಗಿಲ್ಲ. ನನ್ನನ್ನು ವಜಾ ಮಾಡುವ ಬಗ್ಗೆ ಬರೆದ ಪತ್ರದಲ್ಲೂ ನಿಖರ ಕಾರಣ ಕೊಟ್ಟಿಲ್ಲ. ಆದರೆ, ದೇವಸ್ಥಾನದ ಟ್ರಸ್ಟ್ನ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂಓದಿ: ನೂಪುರ್ ಶರ್ಮಾ, ಓವೈಸಿ, ಸ್ವಾಮಿ ಯತಿ ನರಸಿಂಹಾನಂದ ಸೇರಿ 10 ಮಂದಿ ವಿರುದ್ಧ ಪ್ರಕರಣ