ಪಿಂಪ್ರಿ-ಚಿಂಚ್‌ವಾಡ್ : ದೇಶಾದ್ಯಂತ ಕೊರೊನಾ ಅಟ್ಟಹಾಸ ವ್ಯಾಪಕವಾಗಿ ಹರಡುತ್ತಿದೆ. ಜನ ಸರಿಯಾದ ವೈದ್ಯಕೀಯ ಸೌಲಭ್ಯವಿಲ್ಲದೆ, ಆಕ್ಸಿಜನ್-ವೆಂಟಿಲೇಟರ್ ಸಿಗದೇ ಅನಿವಾರ್ಯವಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಈ ನಡುವೆ ಸರ್ಕಾರ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎಂಬ ವಿರೋಧ ಪಕ್ಷಗಳ ಆಕ್ರೋಶದ ನಡುವೆ ಅನಿವಾರ್ಯವಾಗಿ ಲಾಕ್ಡೌನ್ ಜಾರಿ ಮಾಡಿ ಕುಳಿತಿದೆ.
ಮಹಾರಾಷ್ಟ್ರದ ಚಿಂಚ್‌ವಾಡ್ ಎಂಬಲ್ಲಿ ಬಿಜೆಪಿ ಶಾಸಕರೊಬ್ಬರು ಕೋವಿಡ್ ನಿಯಮವನ್ನು ಉಲ್ಲಂಘಿಸಿ ಕಾರ್ಯಕರ್ತರೊಂದಿಗೆ ಡ್ಯಾನ್ಸ್ ಮಾಡಿ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಬಿಜೆಪಿ ಶಾಸಕ ಮಹೇಶ್ ಲ್ಯಾಂಡ್ಜ್ ಅವರು ತಮ್ಮ ಮಗಳ ಮದುವೆ ಸಮಾರಂಭವನ್ನು ಜೂನ್ 6ಕ್ಕೆ ನಿಶ್ಚಯಿಸಿದ್ದಾರೆ. ಹೀಗಾಗಿ, ನಿನ್ನೆ ಮಗಳಿಗೆ ಹಳದಿ ಸಮಾರಂಭವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಸಾಕಷ್ಟು ಜನರನ್ನು ಆಹ್ವಾನ ಮಾಡಿದ್ದಾರೆ.
ಇದಿಷ್ಟೇ ಅಲ್ಲದೇ, ಸಮಾರಂಭದಲ್ಲಿ ಭಾಗಿಯಾದ ಕಾರ್ಯಕರ್ತರು ಯಾರೊಬ್ಬರು ಮುಖಕ್ಕೆ ಮಾಸ್ಕ್ ಹಾಕದೆ ಶಾಸಕರೊಂದಿಗೆ ಕುಣಿದು ಕುಪ್ಪಳಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ.
ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಶಾಸಕರ ಬೇಜಾವಬ್ದಾರಿತನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹೇಶ್ ಲ್ಯಾಂಡ್ಜ್ ಯಾರು?: ಮಹೇಶ್ ಲ್ಯಾಂಡ್ಜ್ ಬಿಜೆಪಿ ನಾಯಕ ಮತ್ತು ಪುಣೆ ನಗರದ ಭೋಸಾರಿ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ಪಿಂಪ್ರಿ-ಚಿಂಚ್ವಾಡ್ ಶಖಾದ ಪ್ರಸ್ತುತ ನಗರ ಅಧ್ಯಕ್ಷರಾಗಿದ್ದಾರೆ.
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಅವರು, 2017ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು.
ಓದಿ: ಚಾಮರಾಜನಗರ ಜಿಲ್ಲಾಸ್ಪತ್ರೆಗೆ ನಿವೃತ್ತ ನ್ಯಾ. ಬಿ ಎ ಪಾಟೀಲ್ ಭೇಟಿ, ಕಡತ ಪರಿಶೀಲನೆ!