ಪಾಟ್ನಾ( ಬಿಹಾರ): ಅಕ್ಟೋಬರ್ 2 ರಂದು ಬಿಹಾರ ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆ ವರದಿ ಪ್ರಕಟಿಸಲಾಗಿತ್ತು. ಇದೀಗ ಈ ಜಾತಿಗಣತಿ ವರದಿ ಪ್ರಕಟವಾದ ಮೇಲೆ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಬಚೌಲ್ ಅಲ್ಲಿನ ರಾಜ್ಯ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಅವರು, 'ಬಿಹಾರದಲ್ಲಿ ಜಾತಿ ಜಾತಿಗಣತಿ ನಡೆಸಲಾಗಿದ್ದು, ಇದೀಗ ಬಿಹಾರ ರಾಜ್ಯ ಹಿಂದೂ ಬಹುಸಂಖ್ಯಾತರ ರಾಜ್ಯ ಎಂಬುದು ಸ್ಪಷ್ಟವಾಗಿದೆ. ರಾಜ್ಯದ ಜನಸಂಖ್ಯೆ ಶೇಖಡಾ 82ರಷ್ಟು ಜನ ಹಿಂದೂಗಳಾಗಿದ್ದಾರೆ. ಹೀಗಾಗಿ ಬಿಹಾರ ರಾಜ್ಯವನ್ನು ಹಿಂದೂ ರಾಜ್ಯ ಎಂದು ಘೋಷಿಸಬೇಕು. ಇದರ ಮೂಲಕ ಹಿಂದೂಗಳಿಗೆ ಸರ್ಕಾರದ ಯೋಜನೆಗಳ ಹೆಚ್ಚಿನ ಲಾಭವನ್ನು ನೀಡುವ ಕೆಲಸ ಮಾಡಬೇಕು' ಎಂದಿದ್ದಾರೆ.
ಹಾಗೆ, ಬಿಹಾರದಲ್ಲಿ ಅತೀ ವೇಗವಾಗಿ ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ. ರಾಜ್ಯದಲ್ಲಿ ಕುಟುಂಬ ಯೋಜನಾ ಕಾರ್ಯಕ್ರಮ ನಡೆಯುತ್ತಿಲ್ಲವೇಕೆ ಎಂದು ರಾಜ್ಯ ಆರೋಗ್ಯ ಸಚಿವರನ್ನು ಶಾಸಕ ಹರಿಭೂಷಣ್ ಪ್ರಶ್ನಿಸಿದ್ದಾರೆ. ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿರುವುದು ಬಿಹಾರದ ಜನತೆಗೆ ಅತೀವ ಕಳವಳಕಾರಿ ವಿಷಯ. ''ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡುವ ಮೂಲಕ ಬಿಹಾರ ಸರಕಾರ ಯಾವ ರೀತಿಯಾಗಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂಬುದು ನಮಗೆ ಮಾತ್ರ ಗೊತ್ತು. ಇದು ಬಿಹಾರದ ಜನರಿಗೂ ಗೊತ್ತು. ಸಮಯ ಬಂದಾಗ, ಜಾತಿ ಆಧಾರಿತ ರಾಜಕೀಯ ಮಾಡುವವರಿಗೆ ಸಾರ್ವಜನಿಕರು ಉತ್ತರ ನೀಡುತ್ತಾರೆ"ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ವಿರೋಧದ ನಡುವೆ ಪ್ರಕಟವಾಗಿತ್ತು ಜಾತಿ ಸಮೀಕ್ಷೆ ವರದಿ: ಬಿಹಾರದ ಜಾತಿಗಣತಿಗೆ ಸಂಬಂಧಿಸಿ ಈ ಸಮೀಕ್ಷೆಯನ್ನು ಕೇಂದ್ರ ಸರ್ಕಾರವೇ ಮಾಡಬೇಕು ಎಂಬ ಹೇಳಿಕೆಗಳು ಇತ್ತು. ಆದರೆ, ಸುಪ್ರೀಂ ಕೋರ್ಟ್ ಜಾತಿ ಗಣತಿಯನ್ನು ಕೇಂದ್ರ ಸರ್ಕಾರವೇ ನಡೆಸಬೇಕು ಎಂಬ ವಾದವನ್ನು ತಳ್ಳಿ ಹಾಕಿ ಯಾವುದೇ ರಾಜ್ಯಗಳ ಸಾಂವಿಧಾನಿಕ ಅಧಿಕಾರವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿತ್ತು. ಈ ಹೇಳಿಕೆ ಬೆನ್ನಲ್ಲೇ ಸರ್ಕಾರ ಜಾತಿಗಣತಿಯ್ನನು ನಡೆಸಿ ವರದಿ ಪ್ರಕಟಿಸಿತ್ತು. ವರದಿ ಪ್ರಕಾರ ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಅತ್ಯಂತ ಹಿಂದುಳಿದ ವರ್ಗದವರಿದ್ದಾರೆ. ಅವರ ಸಂಖ್ಯೆ ಶೇಕಡಾ 36.01 ರಷ್ಟಿದೆ. ಹಿಂದುಳಿದ ವರ್ಗದವರು ಶೇಕಡಾ 27.12 ರಷ್ಟಿದ್ದಾರೆ. ಈ ಎರಡು ಸಮುದಾಯಗಳ ಒಟ್ಟು ಪ್ರಮಾಣ 63 ಪ್ರತಿಶತದಷ್ಟಿದೆ. ಕುರ್ಮಿಗಳು 2.87 ಪ್ರತಿಶತದಷ್ಟಿದ್ದು ಕಡಿಮೆ ಸಂಖ್ಯೆಯಲ್ಲಿದ್ದಾರೆ.
ರಾಜ್ಯದಲ್ಲಿರುವ ಜಾತಿಗಳ ಪ್ರಮಾಣ: ಅತ್ಯಂತ ಹಿಂದುಳಿದ ವರ್ಗಗಳ(EBC) ಜನಸಂಖ್ಯೆಯು 36.01% ರಷ್ಟು ಇದ್ದು, ರಾಜ್ಯದಲ್ಲಿಯೇ ಅತ್ಯಧಿಕ ಪ್ರಮಾಣವಾಗಿದೆ. ಹಿಂದುಳಿದ ವರ್ಗಗಳು ಶೇಕಡಾ 27.12, ಮೇಲ್ಜಾತಿಗಳು ಶೇಕಡಾ 15.52, ಪರಿಶಿಷ್ಟ ಜಾತಿಗಳು ಶೇಕಡಾ 19.65, ಪರಿಶಿಷ್ಟ ಪಂಗಡಗಳು ಶೇಕಡಾ 1.68 ರಷ್ಟಿದ್ದಾರೆ ಎಂದು ಎಂದು ಸಮೀಕ್ಷೆ ಹೇಳಿದೆ. ಹಿಂದುಳಿದ ವರ್ಗಗಳಲ್ಲಿ ಯಾದವರ ಜನಸಂಖ್ಯೆಯು 14.26% ರಷ್ಟಿದ್ದರೆ, ಕುಶ್ವಾಹ ಮತ್ತು ಕುರ್ಮಿಗಳು ಕ್ರಮವಾಗಿ ಶೇಕಡಾ 4.27 ಮತ್ತು ಶೇಕಡಾ 2.87 ರಷ್ಟಿದ್ದಾರೆ.
ಇದನ್ನೂ ಓದಿ: ಬಿಹಾರದ ಜಾತಿಗಣತಿ ವರದಿ ಸಿಂಧುವೇ?: ಸುಪ್ರೀಂ ಕೋರ್ಟ್‌ನಲ್ಲಿ ಅಕ್ಟೋಬರ್ 6ರಂದು ವಿಚಾರಣೆ