ನವದೆಹಲಿ: ಪಶ್ಚಿಮ ಬಂಗಾಳ ಮತ್ತು ಅಸ್ಸೋಂ ವಿಧಾನಸಭಾ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಭಾರತೀಯ ಜನತಾ ಪಕ್ಷ ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಮತ್ತು ಪಕ್ಷದ ಇತರ ಸದಸ್ಯರು ಸೇರಿದಂತೆ ಉನ್ನತ ನಾಯಕರು ಗುರುವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ ಅಸ್ಸೋಂ ಮತ್ತು ಪಶ್ಚಿಮ ಬಂಗಾಳದ ಮುಖಂಡರೊಂದಿಗೆ ಸಭೆ ನಡೆಸಿದರು.
ಬಿಜೆಪಿ ಮತ್ತು ಇಬ್ಬರು ಮೈತ್ರಿ ಪಾಲುದಾರರು ಸೇರಿದಂತೆ 126 ಸದಸ್ಯರ ಅಸ್ಸೋಂ ಅಸೆಂಬ್ಲಿ ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮೂಲಗಳ ಪ್ರಕಾರ, ಬಿಜೆಪಿ 92 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಅಸೋಂ ಗಣ ಪರಿಷತ್ (ಎಜಿಪಿ) 26 ಸ್ಥಾನಗಳು ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) 8 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ನಿನ್ನೆ ನಡೆದ ಸಭೆಯಲ್ಲಿ, 84 ಸ್ಥಾನಗಳಿಗೆ ಅಭ್ಯರ್ಥಿಗಳ ಬಗ್ಗೆ ಚರ್ಚಿಸಿ ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೈತ್ರಿಯೊಂದಿಗಿನ ಸಮಸ್ಯೆ ಬಗೆಹರಿಸಿದ ನಂತರ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ.
ಸಭೆಯಲ್ಲಿ ಪಶ್ಚಿಮ ಬಂಗಾಳದ ಮೊದಲ ಎರಡು ಹಂತದ ಸ್ಥಾನಗಳ ಅಭ್ಯರ್ಥಿಗಳ ಪಟ್ಟಿಯ ಬಗ್ಗೆ ಚರ್ಚಿಸಿ ಅಂತಿಮಗೊಳಿಸಲಾಯಿತು. ಹಾಲಿ ಶಾಸಕರಾದ ಸುವೇಂದು ಅಧಿಕಾರಿ ಇರುವ ನಿರ್ಣಾಯಕ ಕ್ಷೇತ್ರವಾದ ನಂದಿಗ್ರಾಮ್ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಒಂದು ಕಾಲದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡರ ಆಪ್ತ ಸಹಾಯಕವಾಗಿದ್ದ ಸುವೇಂದು ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಜೆಪಿಗೆ ಸೇರಿದರು. ನಂದಿಗ್ರಾಮ್ ಸ್ಥಾನದಿಂದ ಅಧಿಕಾರಿಯು ಬ್ಯಾನರ್ಜಿ ವಿರುದ್ಧ ನಿಲ್ಲಬೇಕೆನ್ನುವುದು ಬಿಜೆಪಿ ರಾಜ್ಯ ನಾಯಕರು ಇಚ್ಛೆಯಾಗಿದೆ. ಕೆಲವು ದಿನಗಳ ಹಿಂದೆ ಸುವೇಂಡು ಸ್ವತಃ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದರು.
ಪಶ್ಚಿಮ ಬಂಗಾಳದ ಸಿಎಂ ಜನವರಿ 18 ರಂದು ನಂದಿಗ್ರಾಮ್ ಮತ್ತು ಭವಾನಿಪುರ ಸ್ಥಾನಗಳಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಒಂದು ವೇಳೆ, ಟಿಎಂಸಿ ಮುಖ್ಯಸ್ಥರ ವಿರುದ್ಧ ನಂದಿಗ್ರಾಮ್ ಸ್ಥಾನದಲ್ಲಿ ಸುವೇಂದು ಸ್ಪರ್ಧಿಸುವುದಿಲ್ಲ ಎಂದರೆ ಕೇಂದ್ರ ಸರ್ಕಾರದ ಮಂತ್ರಿಯೊಬ್ಬರು ಬ್ಯಾನರ್ಜಿ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಚರ್ಚೆ ಇನ್ನೂ ಅಂತಿಮಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಹೆಚ್ಚಿನ ಸಭೆಗಳು ಮತ್ತು ಸಮಸ್ಯೆಗಳನ್ನು ಬಗೆಹರಿಸಿದ ನಂತರ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಅಥವಾ ನಾಳೆ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮಾರ್ಚ್ 27 ರಿಂದ ಎಂಟು ಹಂತಗಳಲ್ಲಿ ನಡೆಯಲಿದ್ದು, ಅಂತಿಮ ಸುತ್ತಿನ ಮತದಾನ ಏಪ್ರಿಲ್ 29 ರಂದು ನಡೆಯಲಿದೆ. ಅಸ್ಸೋಂ ವಿಧಾನಸಭಾ ಚುನಾವಣೆ ಮಾರ್ಚ್ 27 ರಿಂದ ಮೂರು ಹಂತಗಳಲ್ಲಿ ನಡೆಯಲಿದ್ದು, ಅಂತಿಮ ಸುತ್ತಿನ ಮತದಾನ ಏಪ್ರಿಲ್ 6 ರಂದು ನಡೆಯಲಿದೆ. ಎರಡೂ ರಾಜ್ಯಗಳಲ್ಲಿ ಮತ ಎಣಿಕೆ ಮೇ 2 ರಂದು ನಡೆಯಲಿದೆ.