ಗುವಾಹಟಿ : ಅಸ್ಸೋಂನಲ್ಲಿ ನಡೆದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಮೈತ್ರಿಕೂಟವು ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಕೇಸರಿ ಪಕ್ಷವು ಮೂರು ಸ್ಥಾನಗಳನ್ನು ಗೆದ್ದುಕೊಂಡರೆ ಅದರ ಮಿತ್ರ ಪಕ್ಷ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಎರಡು ಕ್ಷೇತ್ರಗಳಲ್ಲಿ ಜಯದ ನಗೆ ಬೀರಿದೆ.
ಭಬಾನಿಪುರದಲ್ಲಿ ಫಣಿ ತಾಲೂಕ್ದಾರ್, ಮರಿಯಾನಿಯಲ್ಲಿ ರೂಪಜ್ಯೋತಿ ಕುರ್ಮಿ ಹಾಗೂ ಥೌರಾದಲ್ಲಿ ಸುಶಾಂತ ಬೊರ್ಗೊಹೈನ್ ಅವರು ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇತರೆ ಪಕ್ಷಗಳ ಅಡಿಯಲ್ಲಿ ಸ್ಪರ್ಧಿಸಿ ಗೆದಿದ್ದರು. ಬಳಿಕ ಆ ಪಕ್ಷಗಳಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಇದೀಗ ಕೇಸರಿ ಪಕ್ಷದಿಂದ ಈ ಮೂವರು ಗೆದ್ದು ಬಂದಿದ್ದಾರೆ.
ಕುರ್ಮಿ ಅವರು ಮರಿಯಾನಿ ವಿಧಾನಸಭಾ ಕ್ಷೇತ್ರದಲ್ಲಿ ಆರನೇ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಲುಹಿತ್ ಕೊನ್ವಾರ್ ಅವರನ್ನು 40,104 ಮತಗಳ ಅಂತರದಿಂದ ಸೋಲಿಸಿದ್ದಾರೆ. ತಾಲುಕ್ದಾರ್ ಭಬಾನಿಪುರ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಸೈಲೇಂದ್ರ ದಾಸ್ ಅವರನ್ನು 25,641 ಮತಗಳಿಂದ ಮಣಿಸಿದ್ದಾರೆ. ಬೊರ್ಗೊಹೈನ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರೈಜೋರ್ ದಳದ ಧೈಜ್ಯ ಕೊನ್ವಾರ್ ವಿರುದ್ಧ 30,561 ಮತಗಳ ಅಂತರದಿಂದ ಗೆದ್ದು ಥೌರಾ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.
ಗೊಸ್ಸೈಗಾಂವ್, ತಮುಲ್‌ಪುರದಲ್ಲಿ ಮೈತ್ರಿಗೆ ಗೆಲುವು
ಬಿಜೆಪಿಯ ಮಿತ್ರ ಪಕ್ಷವಾದ ಯುಪಿಪಿಎಲ್ ಗೊಸ್ಸೈಗಾಂವ್ ಕ್ಷೇತ್ರದಲ್ಲಿ ಜಿರೋನ್ ಬಸುಮತಾರಿ ಅವರು ಕಾಂಗ್ರೆಸ್ ಅಭ್ಯರ್ಥಿ ಜೊವೆಲ್ ತುಡು ಅವರನ್ನು 28,252 ಮತಗಳ ಅಂತರದಿಂದ ಸೋಲಿಸಿದರೆ, ಮತ್ತೊಂದೆಡೆ ತಮುಲ್‌ಪುರದಲ್ಲಿ ಜೋಲೆನ್ ಡೈಮರಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ, ಸ್ವತಂತ್ರ ಅಭ್ಯರ್ಥಿ ಗಣೇಶ್ ಕಚಾರಿ ಅವರನ್ನು 57,059 ಮತಗಳ ಅಂತರದಲ್ಲಿ ಸೋಲಿನ ರುಚಿ ತೋರಿಸಿದ್ದಾರೆ. ಗೊಸ್ಸೈಗಾಂವ್‌ನಲ್ಲಿ ಬಿಪಿಎಫ್ ಮತ್ತು ತಮುಲ್‌ಪುರದಲ್ಲಿ ಯುಪಿಪಿಎಲ್ ಶಾಸಕರ ಮರಣದ ನಂತರ ಈ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು.
ಟೀ-ಬುಡಕಟ್ಟು ಸಮುದಾಯದ ಫೈರ್‌ಬ್ರಾಂಡ್ ನಾಯಕ ಕುರ್ಮಿ, ಈ ಹಿಂದೆ ಕಾಂಗ್ರೆಸ್ ಟಿಕೆಟ್‌ನಲ್ಲಿ ಮರಿಯಾನಿಯಿಂದ ಸತತ ಐದು ಬಾರಿ ಗೆದ್ದಿದ್ದರು. ಆದರೆ, ಪಕ್ಷದ ರಾಷ್ಟ್ರೀಯ ನಾಯಕರು ತಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂದು ಆರೋಪಿಸಿ ಜೂನ್‌ನಲ್ಲಿ ಬಿಜೆಪಿ ಸೇರಿದ್ದರು.
126 ಸದಸ್ಯ ಬಲದ ಅಸ್ಸೋಂ ವಿಧಾನಸಭೆಯಲ್ಲಿ ಬಿಜೆಪಿಯ ಬಲ 62ಕ್ಕೆ ಮತ್ತು ಯುಪಿಪಿಎಲ್ 8ಕ್ಕೆ ಏರಿಕೆಯಾಗಿದೆ. ಉಪಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದ ಆಡಳಿತಾರೂಢ ಒಕ್ಕೂಟದ ಮತ್ತೊಂದು ಪಾಲುದಾರ ಅಸೋಮ್ ಗಣ ಪರಿಷತ್ ಒಂಬತ್ತು ಶಾಸಕರನ್ನು ಹೊಂದಿದೆ. ಪ್ರತಿಪಕ್ಷದ ಕಾಂಗ್ರೆಸ್ ಬಲ 27, ಎಐಯುಡಿಎಫ್ 15, ಬಿಪಿಎಫ್ ಮೂವರು, ಸಿಪಿಐ(ಎಂ) ಒಬ್ಬರು ಹಾಗೂ ಒಬ್ಬ ಪಕ್ಷೇತರ ಶಾಸಕರೂ ಇದ್ದಾರೆ.