ಮೀರತ್(ಉತ್ತರಪ್ರದೇಶ): ಯುಪಿ ಪೊಲೀಸರು ಶ್ರೀಕಾಂತ್ ತ್ಯಾಗಿ ಅವರ ಬಂಧನಕ್ಕೆ ನಿರಂತರ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಕೊನೆಗೂ ಇಂದು ಬೆಳಗ್ಗೆ ಪೊಲೀಸರ ಕೈಗೆ ಶ್ರೀಕಾಂತ್ ತ್ಯಾಗಿ ಸಿಕ್ಕಿಬಿದ್ದಿದ್ದಾರೆ. ಶ್ರೀಕಾಂತ್ ತ್ಯಾಗಿಯನ್ನು ಬಂಧಿಸಿದ ನೋಯ್ಡಾ ಪೊಲೀಸರು ಕಾರ್ವೊಂದನ್ನು ವಶಪಡಿಸಿಕೊಂಡಿದ್ದಾರೆ. ಆ ಕಾರಿಗೆ ಉತ್ತರಪ್ರದೇಶದ ವಿಧಾನ ಸಭೆಯ ಸ್ಟಿಕ್ಕರ್ ಲಗತ್ತಿಸಿರುವುದು ಕಂಡುಬಂದಿದೆ.
ಇಂದು ಬೆಳಗ್ಗೆ ಶ್ರೀಕಾಂತ್ ತ್ಯಾಗಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಜತೆಗೆ ಇನ್ನೂ ಮೂವರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಇಂದು ಆರೋಪಿಗಳನ್ನು ಕೋರ್ಟ್ಗೆ ಹಾಜರು ಪಡಿಸುವ ಸಾಧ್ಯತೆಯಿದೆ.
ಪ್ರಕರಣ ಹಿನ್ನೆಲೆ.. ಆಗಸ್ಟ್ 6 ರಂದು ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಅವರು ಮಹಿಳೆಯ ಮೇಲೆ ಹಲ್ಲೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆ ವಿಡಿಯೋ ವೈರಲ್ ಆದ 24 ಗಂಟೆಗಳಲ್ಲಿ 12ಕ್ಕೂ ಹೆಚ್ಚು ಮಂದಿ ನೋಯ್ಡಾದ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಗೆ ನುಗ್ಗಿ ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದರು. ಇದಾದ ನಂತರ ಸಂಸದ ಮಹೇಶ್ ಶರ್ಮಾ ಸ್ಥಳಕ್ಕಾಗಮಿಸಿ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು.
ತ್ಯಾಗಿ ಮನೆಯಲ್ಲಿ ಅಕ್ರಮ ಕಟ್ಟಡ ನೆಲಸಮ: ಶ್ರೀಕಾಂತ್ ತ್ಯಾಗಿ ಅವರ ಮನೆ ನೆಲಸಮಗೊಳಿಸಲಾಗಿದ್ದು, ಭಂಗೇಲ್‌ನಲ್ಲಿರುವ ಅಂಗಡಿಗಳ ಮೇಲೂ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವಿಚಾರವನ್ನು ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅರಿತು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದರು.