ಮಾಲ್ಡಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಬಿಜೆಪಿ ಮುಖಂಡ ಪ್ರಭಾತ್ ತುಡುಗೆ ಶುಕ್ರವಾರ ತಡರಾತ್ರಿ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿದ್ದಾರೆ.
ಓಲ್ಡ್ ಮಾಲ್ಡಾ ಭಾಬುಕ್ ಗ್ರಾಮ ಪಂಚಾಯತ್‌ನ ಮಹೀಶ್‌ಬಾಥನ್ ಗ್ರಾಮದ ರಂಜಕಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡ ಅವರನ್ನು ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಲಿಯಾಚಕ್ ಪೊಲೀಸ್ ಠಾಣಾ ವ್ಯಾಪ್ತಿಯ ನಾರಾಯಣಪುರ ಗ್ರಾಮದ ನಿವಾಸಿ ಅಲಿಮ್ ಖಾನ್ (22) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಯುವಕರು ತಮ್ಮ ಮನೆಯ ಮುಂದೆ ರಸ್ತೆಯಲ್ಲಿ ಮಾತನಾಡುತ್ತಿರುವುದನ್ನು ನೋಡಿದ್ದಾರೆ. ಅವರ ಬೈಕ್‌ನಲ್ಲಿ ನಂಬರ್ ಪ್ಲೇಟ್ ಇಲ್ಲದಿರುವುದನ್ನು ಸಹ ಅವರು ಗಮನಿಸಿದ್ದಾರೆ. ಏನೋ ತಪ್ಪಾಗಿದೆ ಎಂದು ಅನುಮಾನಿಸಿದ ಪ್ರಭಾತ್ ಅವರನ್ನು ಪ್ರಶ್ನಿಸಲು ತೆರಳಿದ್ದಾರೆ. ಆಗ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಪ್ರಭಾತ್ ಅವರು ತುರ್ಬನ್(ಟೊಪ್ಪಿ) ಧರಿಸಿದ್ದ ಕಾರಣ ತಲೆಗೆ ಗುಂಡು ತಗುಲದೆ ಬದುಕುಳಿದಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿದ ಬಿಜೆಪಿಯ ಜಿಲ್ಲಾ ಮಟ್ಟದ ನಾಯಕ ಚಂಪೈ ಬೆಸ್ರಾ, ವಿಧಾನಸಭಾ ಚುನಾವಣೆಯ ನಂತರ ಇಂತಹ ಅನೇಕ ಘಟನೆಗಳು ನಡೆದಿದ್ದು, ಇದರಲ್ಲಿ ಬಿಜೆಪಿ ನಾಯಕರನ್ನೇ ಗುರಿಯಾಗಿಸಲಾಗಿದೆ. ಈ ಕುರಿತು ಸಮಗ್ರ ಪೊಲೀಸ್ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.
ಆದರೆ ಈ ಘಟನೆಗೆ ರಾಜಕೀಯ ಸಂಬಂಧವಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಮತ್ತೊಂದೆಡೆ ಆರೋಪಿ ದುಷ್ಕರ್ಮಿಯನ್ನು ನಗರಸಭೆಯ ಸ್ವಯಂಸೇವಕರು ವೇಗದ ಚಾಲನೆ ಮಾಡಿದ ಆರೋಪದ ಮೇಲೆ ಹಿಡಿದು ಆತನಿಂದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಆತ ಬಿಜೆಪಿ ನಾಯಕನಿಗೆ ಶೂಟ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.