ಜಬಲ್ಪುರ್ (ಮಧ್ಯಪ್ರದೇಶ): ನಾಗ್ಪುರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಹಿಳಾ ನಾಯಕಿ ಸನಾ ಖಾನ್ ನಾಪತ್ತೆ ಪ್ರಕರಣ ಪೊಲೀಸರಿಗೆ ಜಟಿಲವಾಗಿ ಪರಿಣಮಿಸಿದೆ. ಕಳೆದ 8 ದಿನಗಳಿಂದ ಇವರ ಬಗ್ಗೆ ಯಾವುದೇ ಮಾಹಿತಿ ಹೊರಬೀಳದ ಕಾರಣ, ಕುಟುಂಬದವರ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಮಧ್ಯಪ್ರದೇಶದ ಜಬಲ್ಪುರದಲ್ಲಿ ಆಗಸ್ಟ್ 2 ರಂದು ಕೊನೆಯದಾಗಿ ಕಾಣಿಸಿಕೊಂಡಿದ್ದ ಸನಾ ಅವರು ಜಬಲ್ಪುರದಿಂದ ನಾಪತ್ತೆಯಾಗಿದ್ದಾರೆ ಎಂದು ನಾಗ್ಪುರ ಪೊಲೀಸರು ಹೇಳಿದ್ದಾರೆ. ಆದರೆ, ಜಬಲ್‌ಪುರ ಪೊಲೀಸರು ಸನಾ ಖಾನ್ ಜಬಲ್‌ಪುರಕ್ಕೆ ಬಂದಿರುವುದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಜಬಲ್ಪುರ ಪೊಲೀಸರ ಪ್ರಕಾರ, ಇದುವರೆಗೆ ಅಂತಹ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಕುಟುಂಬದವರು ನೀಡಿದ ಮಾಹಿತಿ ಸೇರಿದಂತೆ, ಎಲ್ಲ ಅನುಮಾನಗಳ ಕುರಿತು ತನಿಖೆ ಕೈಗೊಳ್ಳಲಾಗಿದೆ.
ಸನಾ ಖಾನ್ ಜಬಲ್‌ಪುರದಿಂದ ನಾಪತ್ತೆಯಾಗಿದ್ದಾರೆ ಎಂದು ಸನಾ ಖಾನ್ ಕುಟುಂಬ ಸದಸ್ಯರು ಹೇಳಿದ್ದಾರೆ. "ಅಮಿತ್ ಸಾಹು ಎಂಬ ವ್ಯಕ್ತಿ, ಸನಾ ಖಾನ್‌ನನ್ನು ಕೊಂದಿದ್ದಾನೆ'' ಎಂದು ಕುಟುಂಬ ಆರೋಪಿಸಿದೆ. ಈ ವಿಚಾರದಲ್ಲಿ ಜಬಲ್‌ಪುರ ಪೊಲೀಸರು ತಮ್ಮ ನಿಲುವು ಸ್ಪಷ್ಟಪಡಿಸಿಲ್ಲ. ಸನಾ ಖಾನ್ ಜಬಲ್‌ಪುರಕ್ಕೆ ಬಂದಿರುವುದು ದೃಢಪಟ್ಟಿಲ್ಲ. ಅಮಿತ್ ಸಾಹು ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ನಡುವೆ, ಅಮಿತ್ ಸಾಹು ವಿರುದ್ಧ ಕಟಂಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರ ಬಗ್ಗೆಯೂ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಅಮಿತ್ ಸಾಹು ನಾಪತ್ತೆಯಾಗಿರುವುದು ಕೂಡಾ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಸಾಧ್ಯವಿರುವೆಡೆ ಜನರೊಂದಿಗೆ ಸಂಪರ್ಕ ಸಾಧಿಸಲಾಗುತ್ತಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ಸನಾಗೆ ಸಂಬಂಧಿಸಿದ ಯಾವುದೇ ಮಾಹಿತಿ ಯಾರಿಗೂ ಲಭಿಸಿಲ್ಲ. ಬೆಲ್ಖಾನುವಿನ ಅಮಿತ್ ಅಲಿಯಾಸ್ ಪಪ್ಪು ಸಾಹು ಅವರ ಧಾಬಾದ ಸುತ್ತಮುತ್ತಲಿನ ಸಿಸಿಟಿವಿಗಳ ಜೊತೆಗೆ ರಾಜುಲ್ ಟೌನ್‌ಶಿಪ್ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಸಹ ಪರಿಶೀಲನೆ ನಡೆಲಾಗಿದೆ.
ಇದನ್ನೂ ಓದಿ: ಪ್ರೇಮ ವಿವಾಹಕ್ಕೆ ಅಡ್ಡಿಯಾದ ತಂದೆಯ ಹತ್ಯೆಗೆ ಸುಪಾರಿ ನೀಡಿದ ಪುತ್ರಿ!