ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದ 106 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಬಹುತೇಕ ಪ್ರಕಟವಾಗಿದ್ದು, ಅತಿ ಹೆಚ್ಚು ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಮೈತ್ರಿಯಾಗಿ ಸ್ಪರ್ಧಿಸಿದ್ದ ಶಿವಸೇನೆ-ಕಾಂಗ್ರೆಸ್-ಎನ್ಸಿಪಿ ಮೈತ್ರಿಯ ಮಹಾವಿಕಾಸ್ ಆಘಾಡಿ ಬಹುಮತ ಸಾಧಿಸುವಲ್ಲಿ ಯಶಸ್ವಿಯಾಗಿದೆ.
106 ಸ್ಥಳೀಯ ಸಂಸ್ಥೆಗಳ ಪೈಕಿ 25ರಲ್ಲಿ ಶರದ್ ಪವಾರ್ ನೇತೃತ್ವದ ಎನ್ಸಿಪಿ, 24 ಸಂಸ್ಥೆಗಳಲ್ಲಿ ಬಿಜೆಪಿ, 18 ಕಾಂಗ್ರೆಸ್ ಹಾಗೂ 14ರಲ್ಲಿ ಶಿವಸೇನೆ ಜಯ ಸಾಧಿಸಿದೆ ಎಂದು ತಿಳಿದುಬಂದಿದೆ. ವಿಶೇಷವೆಂದರೆ ಕೆಲವೊಂದು ಪ್ರದೇಶಗಳಲ್ಲಿ ಕಾಂಗ್ರೆಸ್, ಶಿವಸೇನೆ ಮತ್ತು ಎನ್ಸಿಪಿ ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸಿದ್ದವು.
106 ಸ್ಥಳೀಯ ಸಂಸ್ಥೆಗಳ 1,649 ಸ್ಥಾನಗಳ ಪೈಕಿ ಭಾರತೀಯ ಜನತಾ ಪಾರ್ಟಿ 384 ಸೀಟು, ಎನ್ಸಿಪಿ 344, ಕಾಂಗ್ರೆಸ್ 316 ಹಾಗೂ ಶಿವಸೇನೆ 284 ಸೀಟುಗಳಲ್ಲಿ ಗೆಲುವು ದಾಖಲಿಸಿದೆ. ಉಳಿದಂತೆ 206 ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಇಲ್ಲಿಯವರೆಗೆ 1649 ಸೀಟುಗಳ ಪೈಕಿ 1638 ಸ್ಥಾನದ ಫಲಿತಾಂಶ ಹೊರಬಿದ್ದಿದೆ.
ಇದನ್ನೂ ಓದಿರಿ: ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ಶೂಟರ್ ಅವನಿ ಲೇಖರಾಗೆ ಮಹೀಂದ್ರ ಕಾರು ಗಿಫ್ಟ್!
ಫಲಿತಾಂಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್, ನಾವು ಪ್ರತಿಪಕ್ಷದಲ್ಲಿದ್ದರೂ ಅತಿ ಹೆಚ್ಚಿನ ಸ್ಥಾನಗಳಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದಿದ್ದಾರೆ.