ಪಠಾಣ್‌ಕೋಟ್ (ಪಂಜಾಬ್): ಭಾರತದಲ್ಲಿ ಬಡತನ ಹೋಗಲಾಡಿಸಲು ಕೇಂದ್ರ ಸರ್ಕಾರ ಶತಪ್ರಯತ್ನ ನಡೆಸುತ್ತಿದೆ. ಕೊರೊನಾ ಸಾಂಕ್ರಾಮಿಕ ಉತ್ತುಂಗದ ವೇಳೆ ಸರ್ಕಾರ ಜನರಿಗೆ ಉಚಿತ ಆಹಾರ ಧಾನ್ಯ ವಿತರಣೆ ಮಾಡಿ ಸಂತ ರವಿದಾಸ್ರ ತತ್ವಾದರ್ಶ ಪಾಲಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು.
ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಬುಧವಾರ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸಂತ ರವಿದಾಸ್ ಅವರ ಚಿಂತನೆಗಳನ್ನು ಅನುಸರಿಸುತ್ತಿದೆ. 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ತತ್ವದಂತೆ ಎಲ್ಲರನ್ನೂ ಸಮಾನವಾಗಿ ಕಾಣಲಾಗುತ್ತಿದೆ. ಬಡವರ ಒಳಿತೇ ಸರ್ಕಾರದ ಮುಖ್ಯ ಧ್ಯೇಯ ಎಂದರು.
ದೇಶದ ಎಲ್ಲರಿಗೂ ಉಚಿತ ಲಸಿಕೆ : ಕೊರೊನಾ ವಿರುದ್ಧ ಕೇಂದ್ರ ಸರ್ಕಾರ ಹೋರಾಡಿದ ರೀತಿ ಅನನ್ಯ. ದೇಶದ ಎಲ್ಲಾ ನಾಗರಿಕರಿಗೂ ಉಚಿತ ಲಸಿಕೆ ನೀಡಿದ್ದೇವೆ. ಇದು ದೇಶಕ್ಕೆ ವರದಾನವಾಗಿದೆ. ಜನರ ಆರೋಗ್ಯವೇ ಸರ್ಕಾರಕ್ಕೆ ಮೊದಲ ಆದ್ಯತೆಯಾಗಿತ್ತು ಎಂದು ಅವರು ತಿಳಿಸಿದರು.
ಈವರೆಗೂ ಶೇ.95ಕ್ಕಿಂತ ಹೆಚ್ಚು ಜನರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ ಅನ್ನು ನೀಡಲಾಗಿದೆ. 2ನೇ ಡೋಸ್ ನೀಡಿಕೆ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಲಸಿಕೆಯ ಬಳಿಕ ಕೊರೊನಾ ವಿರುದ್ಧ ಹೋರಾಡಲು ದೇಶವಾಸಿಗಳಿಗೆ ದೊಡ್ಡ ರಕ್ಷಣಾತ್ಮಕ ಗುರಾಣಿ ಸಿಕ್ಕಂತಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕಾಂಗ್ರೆಸ್ ಮತ್ತು ಎಎಪಿ ವಿರುದ್ಧ ಮೋದಿ ವಾಗ್ದಾಳಿ : ಪಂಜಾಬ್ನಲ್ಲಿ ಕಾಂಗ್ರೆಸ್, ದೆಹಲಿಯಲ್ಲಿ ಆಪ್ ಸರ್ಕಾರ ರಾಜ್ಯವನ್ನು ಲೂಟಿ ಮಾಡಿವೆ. ಹಲವಾರು ಹಗರಣಗಳನ್ನು ಮಾಡಿ ಆರ್ಥಿಕ ದಿವಾಳಿ ಮಾಡಿದ್ದಾರೆ. ಒಂದೇ ನಾಣ್ಯದ ಎರಡು ಮುಖವಾಗಿದ್ದರೂ ಪಂಜಾಬ್ನಲ್ಲಿ ಇಬ್ಬರೂ ಪರಸ್ಪರ ವಿರುದ್ಧವಾಗಿ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಪಂಜಾಬ್‌ನ ಯುವಕರನ್ನು ಡ್ರಗ್ಸ್ ದಾಸರನ್ನಾಗಿ ಮಾಡಿದರೆ, ಆಪ್ ಮದ್ಯದ ಚಟ ಹಬ್ಬಿಸಿದೆ ಎಂದು ಆರೋಪಿಸಿದರು.
ಸರ್ಜಿಕಲ್ ಸ್ಟ್ರೈಕ್ ಪುರಾವೆಗೆ ತಿರುಗೇಟು : ಸರ್ಜಿಕಲ್ ಸ್ಟ್ರೈಕ್ ದಾಳಿಗೆ ಪುರಾವೆ ಕೇಳಿದ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ಪ್ರಧಾನಿ ಮೋದಿ, ಇಡೀ ದೇಶ ಪುಲ್ವಾಮಾ ದಾಳಿಯ ದಿನದಂದು ಯೋಧರ ತ್ಯಾಗವನ್ನು ನೆನೆದು ಕಣ್ಣೀರು ಹಾಕಿದರೆ, ಕಾಂಗ್ರೆಸ್ ಪಕ್ಷ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಇನ್ನೂ ಪುರಾವೆ ಕೇಳುತ್ತಿದೆ. ಸೇನೆಯ ಬಲಿದಾನ, ತ್ಯಾಗವನ್ನು ಕಾಂಗ್ರೆಸ್ ಅಗೌರವದಿಂದ ಕಾಣುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಬಿಜೆಪಿ ಎಲ್ಲೆಲ್ಲಿ ಸರ್ಕಾರ ರಚನೆ ಮಾಡಿತೋ ಅಲ್ಲೆಲ್ಲಾ ರಿಮೋಟ್ ಕಂಟ್ರೋಲ್ ಕುಟುಂಬ(ಗಾಂಧಿ ಕುಟುಂಬ) ನಿರ್ನಾಮವಾಯಿತು. ಪಂಜಾಬ್ನಲ್ಲಿ ಕೂಡ ಈ ಬಾರಿ ರಿಮೋಟ್ ಕಂಟ್ರೋಲ್ ಸರ್ಕಾರ ತೊಲಗಬೇಕು ಎಂದು ಕರೆ ನೀಡಿದರು.